Wednesday, 29 February 2012ಮಾರ್ಚ್ ತಿಂಗಳು ಬಂದಿದೆ. ಇನ್ನೆರಡು ತಿಂಗಳು ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಕಾಲ. ತರಗತಿಗಳಲ್ಲಿ ವರ್ಷವೆಲ್ಲಾ ಕಲಿತದ್ದನ್ನು ಪರೀಕ್ಷೆಯ ಮೂಲಕ ಮೌಲ್ಯಮಾಪನಕ್ಕೆ ಒಡ್ಡಿಕೊಳ್ಳುವ ಕಾಲ. ಇಂದಿನ ಪರೀಕ್ಷೆಗಳು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಪಾಠ ಹೇಳಿದ ಗುರುಗಳಿಗೂ, ತಂದೆ ತಾಯಿಗಳಿಗೂ, ಸಾರ್ವಜನಿಕರಿಗೂ ಹೌದು ಎನ್ನುವಂತಾಗಿದೆ. ಪರೀಕ್ಷೆಗಳನ್ನು ನಡೆಸುವುದೇ ಅದ್ಯಾಪಕರಿಗೆ ಒಂದು ಬಗೆಯ ಪರೀಕ್ಷೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ತಮ್ಮ ಮಕ್ಕಳು ಯಶಸ್ಸನ್ನು ಗಳಿಸಲು ತಂದೆ ತಾಯಿಯರು ಪಡುವ ಆತಂಕ, ಶ್ರಮ ಮತ್ತೊಂದು ಬಗೆಯ ಪರೀಕ್ಷೆ. ಇನ್ನು ಪರೀಕ್ಷಾ ಸಂದರ್ಭದಲ್ಲಿ ಸದ್ದು ಗದ್ದಲವಿಲ್ಲದೆ, ಶಾಂತಿಯನ್ನು ಕದಡದೆ ಪರೀಕ್ಷೆ ನಡೆಯಲೆಂಬ ಆತಂಕ ಸಾರ್ವಜನಿಕರನ್ನೂ ಕಾಡುತ್ತದೆ.
ಹಿಂದಿನ ಗುರುಕುಲ ಪದ್ಧತಿಯಲ್ಲಿಯೂ ಪರೀಕ್ಷಾ ವ್ಯವಸ್ಥೆ ಇದ್ದಿತಾದರೂ ಆಗ ಗುರುವಾದವನು ಶಿಷ್ಯರ ನಡೆ ನುಡಿ, ಗಳಿಸಿದ ಜ್ಞಾನ, ಅಧ್ಯಯನ ಮಾಡುತ್ತಿದ್ದ ಬಗೆ-ಮೊದಲಾದುವುಗಳನ್ನು ಗಮನಿಸಿಯೇ ವಿದ್ಯಾರ್ಥಿಯ ಜ್ಞಾನದ ಎತ್ತರವನ್ನು ನಿರ್ಣಯಿಸುತ್ತಿದ್ದರು. ಆದರೆ ಇಂದು ಆ ವ್ಯವಸ್ಥೆ ಇಲ್ಲವಾದರೂ, ವಿದ್ಯಾರ್ಥಿಗಳಿಗೆ ಇನ್ನಿತರ ವಿಷಯಗಳಲ್ಲಿರುವಷ್ಟು ಆಸಕ್ತಿ ಓದಿನಲ್ಲಿ ಇಲ್ಲದಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಪಠ್ಯಪಾಠಕ್ಕಿಂತ ಆಟಪಾಠಗಳತ್ತ ಹಾಗೂ ಟಿವಿ ಇಂಟರ್‌ನೆಟ್‌ಗಳತ್ತಲೇ ಹೆಚ್ಚು ಒಲವು. ಜ್ಞಾನ ಸಂಪಾದನೆಯತ್ತ ಗಮನವೇ ಇಲ್ಲವೇನೋ ಎಂಬ ಅನುಮಾನ ಕಾಡುತ್ತದೆ. ಗುರು ಹಿರಿಯರ ಬಗ್ಗೆ ಗೌರವ ಭಾವನೆಯಿಲ್ಲ. ಹೇಗಾದರೂ ಮಾಡಿ ಪರೀಕ್ಷೆಯಲ್ಲಿ ಪಾಸಾದ ಸರ್ಟಿಫಿಕೇಟ್ ಪಡೆಯಬೇಕೆಂಬುದು ಅವರ ಉದ್ದೇಶ. ಹಾಗೆ ನೋಡಿದರೆ ಇಂದು ಪರೀಕ್ಷೆಗಳ ಪಾವಿತ್ರ್ಯತೆಯೂ ಉಳಿದಿಲ್ಲ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಮಾಡಲು ಅವಕಾಶ ಕಲ್ಪಿಸಿಕೊಟ್ಟು ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ದ್ರೋಹವೆಸಗಿದರೆ ಮತ್ತೆ ಕೆಲವು ಪರೀಕ್ಷಾ ಕೊಠಡಿಗಳಲ್ಲಿ ಮೇಲ್ವಿಚಾರಕರನ್ನು ಹೆದರಿಸಿ ನಕಲು ಮಾಡುವುದು ಕಂಡುಬರುತ್ತಿದೆ. ಕೆಲವೊಮ್ಮೆ ಹಣದಾಸೆಗೆ ಬಲಿಯಾಗಿ ಮೇಲ್ವಿಚಾರಕರೇ ಒಬ್ಬರು ಬರೆದ ಉತ್ತರ ಪತ್ರಿಕೆಯನ್ನು ಬೇರೊಬ್ಬರ ಉತ್ತರ ಪತ್ರಿಕೆಯೊಡನೆ ಸೇರಿಸಲು ಪ್ರಯತ್ನಿಸುವುದು ಆಗಾಗ ನಡೆಯುತ್ತಿರುವುದನ್ನು ಗಮನಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ನಕಲು ಮಾಡಲು ಅವಕಾಶ ಮಾಡಿಕೊಡಲಿಲ್ಲವೆಂದು ತಮಗೆ ಪಾಠ ಹೇಳಿಕೊಟ್ಟ ಅದ್ಯಾಪಕರ ಮೇಲೆಯೇ ಹಲ್ಲೆ ಮಾಡುವ ವಿದ್ಯಾರ್ಥಿಗಳಿದ್ದಾರೆ. ಅದ್ಯಾಪಕರಿಗೆ ವಿದ್ಯಾರ್ಥಿಗಳ ಮೇಲೆ ಹಿಡಿತವಿಲ್ಲ. ಇವುಗಳನ್ನೆಲ್ಲ ಗಮನಿಸುತ್ತಿರುವ  ಪೋಷಕರು ಏನೂ ಮಾಡಲಾಗದೆ ಮೂಕ ಪ್ರೇಕ್ಷಕರಾಗಿದ್ದಾರೆ. ತಮ್ಮ ನಡೆ ನುಡಿಗಳನ್ನು ಗಮನಿಸುತ್ತಿರುವ ಅದ್ಯಾಪಕ ವೃಂದ, ಪೋಷಕ ವೃಂದ ಹಾಗೂ ನೆರೆಹೊರೆಯ ಜನತೆ ಏನೆಂದುಕೊಂಡಾರೊ ಎಂಬ ಕನಿಷ್ಠ ಭಯವೂ ವಿದ್ಯಾರ್ಥಿಗಳಿಗಿಲ್ಲದೇ ಹೋಗಿರುವುದು ನಿಜಕ್ಕೂ ದುರಂತವೇ ಹೌದು. ಹೀಗಾದರೆ ಮುಂದಿನ ಭವಿಷ್ಯದ ಗತಿಯೇನು? ಭವಿಷ್ಯದಲ್ಲಿ  ದೇಶದ ನಿರ್ಮಾಣದ ಹೊಣೆ ಹೊತ್ತವರು ವಿದ್ಯಾರ್ಥಿ ದೆಸೆಯಲ್ಲಿಯೇ ಹೀಗೆ ನಡೆದುಕೊಂಡರೆ ಭವಿಷ್ಯದಲ್ಲಿ ಬೆಳಕನ್ನು ಕಾಣುವ ಬಗೆಯಾದರೂ ಹೇಗೆ? ಎಂಬ ಪ್ರಶ್ನೆ ಕಾಡದೇ ಇರದು.
 ಇದೊಂದು ಪರ್ವಕಾಲ. ಇಂದಿನ ಮಕ್ಕಳು ಹಿಂದಿನ ಪೀಳಿಗೆಗಿಂತ ತುಂಬಾ ಬುದ್ಧಿವಂತರು, ಕುಶಲಮತಿಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇಂದಿನ ವಿದ್ಯಾರ್ಥಿಗಳ ನಡೆವಳಿಕೆಗಳನ್ನು ಗಮನಿಸಿದರೆ ಪರಿಸ್ಥಿತಿ ಆರೋಗ್ಯಕರವಾಗಿಲ್ಲ ಎಂದು ಯಾರಿಗೇ ಆಗಲಿ ಅನಿಸದೇ ಇರದು. ಇದಕ್ಕೆ ಕೇವಲ ವಿದ್ಯಾರ್ಥಿಗಳನ್ನಷ್ಟೇ ಹೊಣೆಗಾರರನ್ನಾಗಿಸುವಂತಿಲ್ಲ. ಇದರಲ್ಲಿ ಭಾವಿ ಸತ್ಪ್ರಜೆಗಳ ನಿರ್ಮಾತೃಗಳೆನಿಸಿದ ಅದ್ಯಾಪಕ ವೃಂದದ ಹೊಣೆ ಅಧಿಕವಾಗಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ, ಜ್ಞಾನಾರ್ಜನೆಯಲ್ಲಿ ಆಸಕ್ತಿ ಮೂಡಿಸಿ ಅವರಲ್ಲಿ ಉತ್ತಮ ಗುಣಶೀಲಗಳನ್ನು ಮೂಡಿಸುವ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಹಾಗೆ ನೋಡಿದರೆ ಇಂದು ಒಳ್ಳೆಯ, ಬುದ್ಧಿವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕೆಲವೇ ಕೆಲವು ವಿದ್ಯಾರ್ಥಿಗಳು ಮಾಡುವ ಹೀನ ಕೃತ್ಯಗಳಿಗೆ ಇಡೀ ವಿದ್ಯಾರ್ಥಿ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಆ ದೃಷ್ಟಿಯಿಂದ ಅದ್ಯಾಪಕರು, ಪೋಷಕರು ಹಾಗೂ ಸರ್ಕಾರ-ಮೂವರೂ ಒಟ್ಟಾಗಿ ಸೇರಿ ಮಕ್ಕಳ ಅಧ್ಯಯನಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು.
ಪೋಷಕರು ತಮ್ಮ ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸುತ್ತಲೇ, ಅವರು ಕಾಲೇಜು ಶಿಕ್ಷಣಕ್ಕೆ ಪ್ರವೇಶ ಪಡೆದ ನಂತರ ಅವರನ್ನು ಬೇರ‍್ಯಾರೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದಂತೆ ಎಚ್ಚರ ವಹಿಸಬೇಕು. ಅವರ ಸ್ನೇಹ ಸಹವಾಸಗಳನ್ನು  ಗಮನಿಸುತ್ತಿರಬೇಕು, ಅಡ್ಡದಾರಿಗಿಳಿಯದಂತೆ ನಿಗಾ ವಹಿಸಬೇಕು. ಸ್ನೇಹಿತರಂತೆ ವರ್ತಿಸಿ ಮಕ್ಕಳ ಮನಸ್ಸಿನಲ್ಲಿರುವುದನ್ನು ಅರಿತು ಅವರಿಗೆ ಮಾರ್ಗದರ್ಶನ ಮಾಡಬೇಕು. ಅವರ ವಿದ್ಯಾಭ್ಯಾಸದ ಅವಧಿ ಮುಗಿಯುವವರೆಗೆ ಜ್ಞಾನಾರ್ಜನೆಯಲ್ಲಿ ತೊಡಗಿಕೊಳ್ಳುವಂತಹ ಸನ್ನಿವೇಶವನ್ನು ಕಲ್ಪಿಸಿಕೊಡಬೇಕು. ಪೋಷಕರಿಗಿಂತ ಹೆಚ್ಚಾಗಿ ಅದ್ಯಾಪಕರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕು. ಪಾಠ ಪ್ರವಚನ ಮಾಡುವುದಷ್ಟೇ ಅಲ್ಲ, ಅದರ ಜೊತೆಗೆ ವಿದ್ಯಾರ್ಥಿಗಳ ನಡೆವಳಿಕೆಗಳನ್ನು ತಿದ್ದುವ ಸಾಮರ್ಥ್ಯವೂ ಇರಬೇಕು. ವರ್ಷಕ್ಕೊಮ್ಮೆ ನಡೆಯುವ ಪರೀಕ್ಷೆಗಳು ಹೆಚ್ಚು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಸರಿಯಾಗಿ ನಡೆಯಬೇಕು. ಇಂದಿನ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಜನ ನಂಬಿಕೆ ಕಳೆದುಕೊಳ್ಳವುದಕ್ಕೆ ಕಾರಣವೂ ಇದೇ ಆಗಿದೆ. ಚೆನ್ನಾಗಿ ಓದಿ, ಚೆನ್ನಾಗಿ ಬರೆದವನಿಗೆ ಕಡಮೆ ಅಂಕ, ಮರು ಎಣಿಕೆಯಲ್ಲಿ ಅದರ ತಿದ್ದುಪಡಿ, ಕಡಮೆ ಬಂದಿದ್ದ ಅಂಕ ಹೆಚ್ಚಾಗುವುದು, ಪ್ರತಿಭಾವಂತರಿಗಿಂತ ದಡ್ಡರೇ ಹೆಚ್ಚು ಅಂಕ ಪಡೆಯುವುದು, ಅದಕ್ಕೆಲ್ಲ ಒಳದಾರಿಗಳಿವೆ ಎಂಬ ಅನುಮಾನ ಜನರಲ್ಲಿ ನೆಲೆಯಾಗಿರುವುದು ಇಡೀ ಪರೀಕ್ಷಾ ವ್ಯವಸ್ಥೆಯ ಬಗೆಗೆ ಜನತೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಜನರಲ್ಲಿ ಬೇರೂರಿರುವ ಈ ಭಾವನೆಯನ್ನು ಅಳಿಸುವಲ್ಲಿ ಅದ್ಯಾಪಕ ವರ್ಗ ಹಾಗೂ ಸರ್ಕಾರ ತಮ್ಮ ಪಾರದರ್ಶಕತೆಯನ್ನು ಮೆರೆಯಬೇಕು. ಪರೀಕ್ಷಾ ಪ್ರಾರಂಭದಿಂದ ಫಲಿತಾಂಶ ಪ್ರಕಟವಾಗುವವರೆಗೆ ಸಂಬಂಧಪಟ್ಟವರೆಲ್ಲರೂ ಎಚ್ಚರದಿಂದ, ನಿಷ್ಪಕ್ಷತನದಿಂದ ಕಾರ್ಯ ನಿರ್ವಹಿಸಿದಾಗ ಎಲ್ಲರಿಗೂ ನ್ಯಾಯ ಒದಗಿಸಿದಂತಾಗುತ್ತದೆ.
ಆ ದೃಷ್ಟಿಯಿಂದ ಈ ಬಗೆಗೆ ಶಿಕ್ಷಣ ತಜ್ಞರು, ಅದ್ಯಾಪಕ ಮತ್ತು ಪೋಷಕ ವರ್ಗದವರು ಹಾಗೂ ಸರ್ಕಾರ ಒಟ್ಟಿಗೆ ಸೇರಿ ಆಮೂಲಾಗ್ರವಾಗಿ ಚರ್ಚಿಸಿ ವಿದ್ಯಾರ್ಥಿ ಹಾಗೂ ಪೋಷಕರಿಗೆ ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಪೂರ್ಣ ನಂಬಿಕೆ ಉಂಟಾಗುವಂತೆ ಮಾಡಬೇಕು.

Tuesday, 28 February 2012


ಶ್ರೀ ಆದಿಚುಂಚನಗಿರಿ ಕ್ಷೇತ್ರ


ಚಾರಿತ್ರಿಕ ಹಿನ್ನೆಲೆ:
ಪುರಾಣ ಪ್ರಸಿದ್ಧವೂ, ಪವಿತ್ರವೂ ಆದ ಶ್ರೀ ಆದಿಚುಂಚನಗಿರಿ ಕ್ಷೇತ್ರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನಲ್ಲಿದೆ. ಮೈಸೂರಿನಿಂದ ತುಮಕೂರಿಗೆ ಹೋಗುವ ಹೆದ್ದಾರಿಯಲ್ಲಿ ಬೆಳ್ಳೂರಿಗೆ ಎರಡು ಮೈಲಿಗಳ ದೂರದಲ್ಲಿ ಚುಂಚನಹಳ್ಳಿಯೆಂಬ ಚಿಕ್ಕ ಗ್ರಾಮವು ಚುಂಚನಗಿರಿಯ ತಪ್ಪಲಿನಲ್ಲಿದೆ. ಉತ್ತರದಕ್ಷಿಣವಾಗಿ ಹಬ್ಬಿರುವ ಕಲ್ಲು-ಬಂಡೆಗಳಿಂದ ಕೂಡಿದ ಈ ಗಿರಿಯು ಸಮುದ್ರ ಮಟ್ಟದಿಂದ ಸುಮಾರು ೩೨೨೧ ಅಡಿ ಎತ್ತರವಾಗಿದೆ. ಹಸಿರು ಕಾನನಗಳಿಂದ ಕೂಡಿ, ರಮಣೀಯವೂ, ಪ್ರಶಾಂತವೂ ಆದ ಈ ಕ್ಷೇತ್ರವು ಪರಶಿವನ ತಪೋಭೂಮಿಯಾಗಿದ್ದಿತೆಂದು ಪುರಾಣ ಮತ್ತು ಜನಪದ ಸಾಹಿತ್ಯದಿಂದ ತಿಳಿದುಬರುತ್ತದೆ. ಈ ಕ್ಷೇತ್ರದ ಸುತ್ತಲೂ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಕ್ಷೇತ್ರ, ಎಡೆಯೂರಿನ ಸಿದ್ಧಲಿಂಗೇಶ್ವರ ಕ್ಷೇತ್ರ, ಚುಂಚನಕಟ್ಟೆ ಶ್ರೀ ರಾಮಕ್ಷೇತ್ರ, ಮೇಲುಕೋಟೆ ಚೆಲುವರಾಯಸ್ವಾಮಿ ಕ್ಷೇತ್ರ, ಹಾಲ್ತಿಯ ಪರಶುರಾಮ ಕ್ಷೇತ್ರಗಳು ಪುಣ್ಯಕ್ಷೇತ್ರಗಳಾಗಿದ್ದು, ಚುಂಚನಗಿರಿ ಕ್ಷೇತ್ರವು ಮಧ್ಯಭಾಗದಲ್ಲಿರುವ, ಯಾತ್ರಾರ್ಥಿಗಳ ಪವಿತ್ರ ಪುಣ್ಯಕ್ಷೇತ್ರವಾಗಿದೆ.
ಶ್ರೀ ಆದಿಚುಂಚನಗಿರಿಯು ಅತ್ಯಂತ ಪ್ರಾಚೀನವೂ, ಪವಿತ್ರವೂ ಆದ ಮಹಾ ಧರ್ಮಕ್ಷೇತ್ರ ಹಾಗೂ ತಪೋಭೂಮಿಯಾಗಿದ್ದು, ಸುಮಾರು ೨೦೦೦ ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿದೆ. ಈ ಗಿರಿಯು ಮಯೂರಗಳ ತಾಣವಾಗಿದ್ದು, ’ಮಯೂರವನ’ ಎಂದು ಕರೆಯಲ್ಪಟ್ಟು, ಪ್ರಶಾಂತ ವಾತಾವರಣದಿಂದ ಕೂಡಿದೆ. ಪ್ರಾಚೀನ ಕಾಲದಿಂದಲೂ ಸಿದ್ಧರು, ಸಂತರು, ಸಾಧುಗಳು, ಋಷಿಗಳು, ಯೋಗಿಗಳು ಮತ್ತು ತಪಸ್ವಿಗಳು ಇಲ್ಲಿ ಅನುಷ್ಠಾನ ಮಾಡಿ ಜೀವನದ ಪರಮ ಗುರಿಯನ್ನು ಸಾಸಿದ್ದಾರೆ.
ಪುರಾಣದಲ್ಲಿ ಉಕ್ತವಾಗಿರುವಂತೆ ಶ್ರೀ ಪೀಠವು ಸ್ಥಾಪನೆಯಾದುದು ತ್ರೇತಾಯುಗದಲ್ಲಿ. ಪರಮೇಶ್ವರನೇ ಈ ಪೀಠದ ಸ್ಥಾಪಕ. ಆ ಪ್ರಕಾರ ಈ ಕ್ಷೇತ್ರವು ಪ್ರಾಚೀನವಾದುದೆಂದು ತಿಳಿಯಬಹುದು.
ಶ್ರೀ ಕ್ಷೇತ್ರದ ಮಹತ್ವವನ್ನು ಸಾರುವ ಪುರಾಣ ಕಥೆ:
ಸಿದ್ಧಯೋಗಿಯ ಅವತಾರವನ್ನು ತಾಳಿದ ಪರಶಿವನು ಗಜಾರಣ್ಯದ ಚುಂಚನಕಟ್ಟೆಗೆ ಬಂದು ಕಾವೇರಿ ನದೀ ತಟದಲ್ಲಿ  ತಪೋಮಗ್ನನಾದನು. ತ್ರೇತಾಯುಗದಲ್ಲಿ ತಂದೆಯ ಆಜ್ಞಾನುಸಾರವಾಗಿ ಶ್ರೀರಾಮನು ಲಕ್ಷ್ಮಣ ಮತ್ತು ಸೀತೆಯೊಡನೆ ದಂಡಕಾರಣ್ಯದ ಪಂಚವಟೀ ತೀರದಲ್ಲಿ ವಾಸ ಮಾಡುತ್ತಿದ್ದಾಗ, ರಾವಣನು ಸೀತಾಪಹರಣ ಮಾಡಿದ ಬಳಿಕ ಸೀತಾನ್ವೇಷಣೆಗೆ ಹೊರಟಿದ್ದ ರಾಮಲಕ್ಷ್ಮಣರು ಚುಂಚನಕಟ್ಟೆ ಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದ ಶಿವನನ್ನು ಕಂಡು ಭಕ್ತಿಯಿಂದ ವಂದಿಸಿದಾಗ ಪ್ರಸನ್ನನಾದ ಶಿವನು ’ನಿಮ್ಮ ಇಷ್ಟಾರ್ಥವು ನೆರವೇರಲೆಂದು ಆಶೀರ್ವದಿಸಿ, ಶ್ರೀರಾಮನಿಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟು, ಪ್ರಶಾಂತವೂ, ರಮಣೀಯವೂ ಆದ ಚುಂಚನಗಿರಿಗೆ ಬಂದು ತಪೋಮಗ್ನನಾದನು’ -ಎಂದು ಒಂದು ಐತಿಹ್ಯವಿದೆ. ಚುಂಚನಕಟ್ಟೆಯಲ್ಲಿ ಇಂದೂ ಒಂದು ಶ್ರೀರಾಮ ದೇವಾಲಯವಿದೆ.
ಈ ಗಿರಿಯ ದಟ್ಟವಾದ ಅರಣ್ಯದಲ್ಲಿ ಚುಂಚ, ಕಂಚರೆಂಬ ಇಬ್ಬರು ಸೋದರ ರಾಕ್ಷಸರು ವಾಸವಾಗಿದ್ದರು. ಅವರು ಜನರಿಗೆ ಹಿಂಸೆಯನ್ನು ಕೊಡುತ್ತಿದ್ದರೆಂದೂ, ಇವರ ಹಿಂಸೆಯನ್ನು ಸಹಿಸಲಾರದೆ ಜನರು ಶಿವನ ಮೊರೆ ಹೊಕ್ಕಾಗ, ಶಿವನು ಈ ರಾಕ್ಷಸರನ್ನು ಸಂಹರಿಸಿದನೆಂದೂ, ಮೊದಲು ಚುಂಚ ವಾಸಮಾಡಿಕೊಂಡಿದ್ದ, ಈ ಗಿರಿಗೆ  ’ಚುಂಚನಗಿರಿ’ ಎಂಬ ಹೆಸರು ಬಂದಿತೆಂದೂ ಜನಪದ ಸಾಹಿತ್ಯದಿಂದ ತಿಳಿದುಬರುತ್ತದೆ.
’ಶ್ರೀ ಆದಿಚುಂಚನಗಿರಿ ಸ್ಥಳ ಮಹಾತ್ಮೆ ಕೃತಿಯ ಪ್ರಕಾರ, ೧೨ ಮಂದಿ ನಾಥರಲ್ಲಿ ಪ್ರಥಮನಾಥನೂ, ಶಿವಸ್ವರೂಪನೂ ಆದ ಸಿದ್ಧಯೋಗಿಯು ಅಲ್ಲಲ್ಲಿ ಸಂಚರಿಸಿ ಧರ್ಮವನ್ನು ಉಪದೇಶಿಸುತ್ತಾ ಚುಂಚನಗಿರಿಗೆ ಬಂದನು. ಇವನನ್ನು ಕಂಡು ಸಂತೋಷಗೊಂಡ ಶಿವನು ’ಎಲೈ ಸಿದ್ಧಯೋಗಿಯೇ ’ಈ ಕ್ಷೇತ್ರವು ನನ್ನ ತಪಸ್ಸಿನಿಂದ ಪವಿತ್ರವಾಗಿದೆ. ಇಲ್ಲಿ ನಾನು ಪಂಚಲಿಂಗಗಳಾಗಿ ಆವಿರ್ಭವಿಸಿರುತ್ತೇನೆ. ನೀನಿಲ್ಲಿ ನೆಲೆಸಿ ಪಂಚಲಿಂಗಗಳನ್ನೂ, ಸ್ತಂಭಾಂಬೆಯನ್ನೂ ಆರಾಸುತ್ತಾ ಲೋಕೋಪಕಾರವನ್ನು ಮಾಡು. ಈ ತಪೋಭೂಮಿಯು ಆದಿಪೀಠ, ಇದು ನಿನ್ನ ಪರಂಪರೆಗೆ ಸೇರಿದ್ದು, ಉಳಿದ ಹನ್ನೊಂದು ನಾಥ ಪೀಠಗಳಿಗೆ ಅಪತಿಗಳನ್ನು ನೇಮಿಸುವ ಅಕಾರ ನಿನ್ನದು. ಅವರು ನಿನ್ನ ಆಜ್ಞಾನುವರ್ತಿಗಳಾಗಿ ನಡೆದುಕೊಳ್ಳಬೇಕು’, ಎಂದು ಹೇಳಿ ರಜತಾದ್ರಿಗೆ ತೆರಳಿದನು.
ಪರಶಿವನ ಆಜ್ಞೆಯಂತೆ ಆದಿಪೀಠವಾದ್ದರಿಂದ, ಚುಂಚನಗಿರಿಗೆ ’ಆದಿಚುಂಚನಗಿರಿ’ ಎಂಬ ಹೆಸರು ಬಂದಿತು. ಸಿದ್ಧಯೋಗಿಯು ಈ ಕ್ಷೇತ್ರದಲ್ಲಿ ನೆಲೆಸಿ, ಆಶ್ರಮದ ಎಲ್ಲಾ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದನು. ಅನಂತರ ಕರ್ಮನಾಥನೆಂಬ ವ್ಯಕ್ತಿಯು ಬಂದು ಸಿದ್ಧಯೋಗಿಯ ಸೇವೆಯಲ್ಲಿ ನಿರತನಾದನು. ಇವನ ಆಚಾರ, ದೈವಭಕ್ತಿ ಮತ್ತು  ಸೇವೆಗಳಿಂದ ಸಂಪ್ರೀತನಾದ ಸಿದ್ಧಯೋಗಿಯು ಸಂಪ್ರದಾಯದಂತೆ ಅವನಿಗೆ ದೀಕ್ಷೆ ಕೊಟ್ಟು, ಮಂತ್ರೋಪದೇಶ ಮಾಡಿ ತನ್ನ ಶಿಷ್ಯನನ್ನಾಗಿ ಸ್ವೀಕರಿಸಿದನು. ಸಕಲ ಶಾಸ್ತ್ರಗಳನ್ನರಿತ ಸಿದ್ಧಯೋಗಿಯು ಗಂಗಾಧರೇಶ್ವರ ದೇವಾಲಯವನ್ನು ಕಟ್ಟಿಸಿದನು. ಭೈರವೇಶ್ವರ ಮತ್ತು ಸ್ತಂಭಾಂಬೆಯನ್ನು ಪ್ರತಿಷ್ಠಾಪನೆ ಮಾಡಿಸಿದನು. ಜಾತಿ, ಮತ ಭೇದವಿಲ್ಲದೆ ಎಲ್ಲರೂ ಮಠದ ಸದ್ಭಕ್ತರಾದರು. ಅನ್ನದಾನವು ಪ್ರಾರಂಭವಾಯಿತು. ಸಿದ್ಧಯೋಗಿಯು ಲೋಕ ವ್ಯವಹಾರವನ್ನು ತ್ಯಜಿಸಿ, ತಪಸ್ಸಿಗೆ ಹೋಗಲು ಬಯಸಿ, ಕರ್ಮನಾಥನಿಗೆ ಸಿದ್ಧ ಸಿಂಹಾಸನವನ್ನು ವಹಿಸಿದನು. ಹೀಗೆ ಪುರಾಣ ಪ್ರಸಿದ್ಧವೂ, ಪ್ರಾಚೀನವೂ ಆದ ಶ್ರೀ ಆದಿಚುಂಚನಗಿರಿ ಮಠವು ಸುದೀರ್ಘವಾದ ಗುರು ಪರಂಪರೆಯನ್ನು ಹೊಂದಿದ್ದು, ಈವರೆಗೆ ೭೧ ಧರ್ಮಗುರುಗಳು ಶ್ರೀ ಕ್ಷೇತ್ರದ ಸಿದ್ಧ ಸಿಂಹಾಸನವನ್ನೇರಿದ್ದಾರೆ. ಈ ಎಲ್ಲಾ ಧರ್ಮಗುರುಗಳು ಲೋಕ ಕಲ್ಯಾಣಕ್ಕಾಗಿ ಧರ್ಮೋಪದೇಶ ಮತ್ತು ಜ್ಞಾನ ಮಾರ್ಗಗಳ ಅರಿವು ಮೂಡಿಸುತ್ತಾ ಬಂದಿದ್ದಾರೆ. ಭೈರವನ ಕರುಣೆಯಿಂದ ಶತಮಾನಗಳಿಂದಲೂ ಈ ಕ್ಷೇತ್ರದಲ್ಲಿ  ಸತತ ಅನ್ನದಾನ ನಡೆಯುತ್ತಿದೆ. ಭೈರವನು ಅನ್ನದಾನಿ ಭೈರವನೆಂದೇ ಪ್ರಸಿದ್ಧನಾಗಿದ್ದು, ಈ ಕ್ಷೇತ್ರವು ’ಅನ್ನದಾನಿ ಮಠ’ವೆಂದೂ, ಅನ್ನಪೂರ್ಣೇಶ್ವರಿಯ ನಿವಾಸವೆಂದೂ ಹೆಸರಾಗಿದೆ.
ಶ್ರೀ ಕ್ಷೇತ್ರಕ್ಕೆ ಸಂಬಂಸಿದಂತೆ ಹೇರಳವಾದ ಜನಪದ ಸಾಹಿತ್ಯವಿರುವುದು. ಇದರ ಪ್ರಕಾರ ಹಳೇಬೀಡಿನ ಬಲ್ಲಾಳರಾಯ, ಸಾಳ್ವ ನರಸಿಂಹರಾಜ ಒಡೆಯರು ಚುಂಚನಗಿರಿಯ ಭಕ್ತರಾಗಿದ್ದು, ಶ್ರೀ ಕ್ಷೇತ್ರಕ್ಕೆ ಬಂದು ದೇವರ ಸೇವೆ ಮಾಡುತ್ತಿದ್ದರೆಂದು ಶಾಸನದಿಂದ ತಿಳಿದುಬರುತ್ತದೆ. ಚೋಳರು, ಹೊಯ್ಸಳರು, ಬಲ್ಲಾಳರು, ವಿಜಯನಗರದ ಅರಸುಮನೆತನದವರು, ಯಲಹಂಕ ಪ್ರಭುಗಳು, ತುರುವೇಕೆರೆ, ಶ್ರೀರಂಗಪುರ, ಬೆಳ್ಳೂರು ಪಾಳಯಪಟ್ಟು -ಇವರುಗಳು ಶ್ರೀ ಕ್ಷೇತ್ರಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರೆಂದು ತಿಳಿದುಬರುತ್ತದೆ. ಹೊಯ್ಸಳ ರಾಜನಾದ ವೀರಸಿಂಹದೇವರು, ಯಲಹಂಕನಾಡ ಪ್ರಭುಗಳು, ಶ್ರೀ ಕ್ಷೇತ್ರದ ಭೈರವನಿಗೆ ದತ್ತಿ ಕೊಟ್ಟ ವಿಚಾರವಿರುವುದು. ಮತ್ಸೆ ಂದ್ರನಾಥರು ಮತ್ತು ಗೋರಖನಾಥರುಗಳ ಬಗೆಗೆ ಕ್ರಿ.ಶ. ೮ನೆಯ ಶತಮಾನದ ಶಂಕರಾಚಾರ್ಯರ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಅಂಶಗಳನ್ನೂ ಗಮನಿಸಿ, ಶ್ರೀ ಕ್ಷೇತ್ರವು ನಾಥ ಸಂಪ್ರದಾಯವನ್ನು ಅಂಗೀಕರಿಸಿದ ಕಾಲದಿಂದ, ಎಂದರೆ ಸುಮಾರು ೧೪೦೦ ವರ್ಷಗಳ ಹಿಂದಿನಿಂದಲೇ ಈ ಕ್ಷೇತ್ರ ಶೈವ ಕ್ಷೇತ್ರವಾಗಿತ್ತು ಎಂದು   ಹೇಳಬಹುದು.
ಕರ್ನಾಟಕ ಸರ್ಕಾರವು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಮಹಿಮೆ, ಮಹತ್ವ, ಮತ್ತು ಲೋಕ ಸೇವೆಯನ್ನು ಮೆಚ್ಚಿ ೧೯೫೬ರಲ್ಲಿ ಅನೇಕ ಮರ್ಯಾದೆಯ ಅಕಾರಗಳನ್ನು ರಾಜ ಬಿರುದುಗಳು, ವಿಶೇಷ ಬಿರುದುಗಳು, ಸಾಧಾರಣ ಬಿರುದುಗಳನ್ನು ನೀಡಿ, ಸಿಬ್ಬಂದಿ ವಗೈರೆಗಳನ್ನು ನೀಡಿ ಆದೇಶವನ್ನು ಹೊರಡಿಸಿದೆ.
ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು
ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯ:
ಶ್ರೀ ಮಠಕ್ಕೆ ಹೋಗುವ ದಾರಿಯ ಪಕ್ಕದಲ್ಲಿಯೇ ಎಡಗಡೆಗೆ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನವಿದೆ. ಕಾಲಭೈರವನ ಬಗೆಗಿರುವ ಕತೆ ಸಿದ್ಧಲಿಂಗ ಪುರಾಣದಲ್ಲಿ ಈ ರೀತಿ ಇದೆ-ರಾಕ್ಷಸ ಸಂಹಾರಾರ್ಥವಾಗಿ ವಿಷ್ಣು ಮೋಹಿನಿಯ ರೂಪವನ್ನು ತಾಳಿ, ತನ್ನ ಕಾರ್ಯವಾದ ಮೇಲೆ ಸ್ವಧಾಮಕ್ಕೆ ಹಿಂದಿರುಗಿದನು. ಆದರೆ ಶಿವನು ಮೋಹಿನಿಯ ಸೌಂದರ್ಯವನ್ನು ಕಂಡು ವ್ಯಾಮೋಹಗೊಂಡನು. ಶಿವನ ಸಂಬಂಧದಿಂದ ಗರ್ಭಿಣಿಯಾದ ಮೋಹಿನಿಯು ಶಿವಶಕ್ತಿಯನ್ನು ಗರ್ಭದಲ್ಲಿ ಒಂಬತ್ತು ತಿಂಗಳ ಕಾಲ ಧರಿಸಿರಲು ಸಾಧ್ಯವಾಗಲಿಲ್ಲ. ಹೀಗೆ ಅಕಾಲದಲ್ಲಿ ಜನಿಸಿದ ವಿಷ್ಣು ಮತ್ತು ಶಿವರ ಶಕ್ತಿಗೆ ಅಕಾಲ ಭೈರವನೆಂದು ಹೆಸರು ಬಂದಿತು. ಮುಂದೆ ಇವನೇ ಕಾಲಭೈರವನೆಂದು ಪ್ರಸಿದ್ಧನಾಗಿ ಶಿವನ ದ್ವಾರಪಾಲಕನಾದನು. ಪಾರ್ವತಿಯ ಮಕ್ಕಳೆಂದು ಪ್ರಸಿದ್ಧರಾದ ಲೋಕಕ್ಕೆ ಅನ್ನದಾತರಾದ ಒಕ್ಕಲಿಗರಿಗೆ ಆರಾಧ್ಯದೇವನಾಗು ಎಂಬ ಶಿವಾಜ್ಞೆಯಂತೆ ಕಾಲಭೈರವನು ಆದಿಚುಂಚನಗಿರಿಗೆ ಬಂದು ನೆಲೆಸಿದನೆಂದು ತಿಳಿದು ಬರುತ್ತದೆ. ಭೈರವನ ಬಗ್ಗೆ ಭಕ್ತರು ಹಾಡಿರುವ ಜನಪದ ಗೀತೆಗಳು ಸಹ ಭೈರವನ ಲೀಲೆಯನ್ನು ಪ್ರತಿಪಾದಿಸುತ್ತವೆ.
ಬಾಗಿಲು ಭೈರವನನ್ನು ’ಅನ್ನದಾನಿ ಭೈರವ’ ಎಂದು ಕರೆಯುವುದು ರೂಢಿಯಲ್ಲಿದೆ. ಇದಲ್ಲದೆ ’ಬೆಟ್ಟದ ಭೈರವ’, ’ಕಾಲಭೈರವ’ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಜಾತಿ, ಮತ, ಭೇದಗಳಿಲ್ಲದೆ ಎಲ್ಲರೂ ಭೈರವನ ಒಕ್ಕಲಾಗಿದ್ದಾರೆ; ಭೈರವನು ಕುಲದೈವ ಹಾಗೂ ಮನೆದೇವರಾಗಿದ್ದುಕೊಂಡು, ಭಕ್ತಾದಿಗಳ ಇಷ್ಟಾರ್ಥಗಳನ್ನು ಕರುಣಿಸುವನು.
ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ  ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಈ ಕ್ಷೇತ್ರದ ಹಿರಿಮೆಗೆ ತಕ್ಕಂತೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಬೃಹತ್ ದೇವಾಲಯವನ್ನು ಸುಮಾರು ೮೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇದು ಇತ್ತೀಚಿನ ಯುಗಮಾನದಲ್ಲಿ ನಿರ್ಮಾಣಗೊಂಡಿರುವ ದೇವಾಲಯಗಳಲ್ಲಿ ವಿಶಿಷ್ಟವಾದುದಾಗಿದೆ. ದಿನಾಂಕ
೨೨-೦೮-೧೯೯೩ರಂದು ಶುಭ ಮುಹೂರ್ತದಲ್ಲಿ ಪರಮಪೂಜ್ಯ  ಜಗದ್ಗುರು ಶ್ರೀಶ್ರೀಶ್ರೀ  ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಶಂಕುಸ್ಥಾಪನೆಗೊಂಡು ದಿನಾಂಕ-೨೦೦೮ರಂದು ಪರಮಪೂಜ್ಯ  ಜಗದ್ಗುರು ಶ್ರೀಶ್ರೀಶ್ರೀ  ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಪೂರ್ವ-ಪಶ್ಚಿಮ ೨೭೫ ಅಡಿ ಹಾಗೂ ಉತ್ತರ-ದಕ್ಷಿಣ ೧೭೫ ಅಡಿಗಳ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ನೂತನ ದೇವಾಲಯವು ಸುಂದರವಾದ ನಾಲ್ಕು ಗೋಪುರಗಳನ್ನು ಹೊಂದಿದ್ದು, ಮೂರು ಗೋಪುರಗಳು ಐವತ್ತೇಳು ಅಡಿ ಎತ್ತರವಿದ್ದು, ಪೂರ್ವದಕ್ಕಿನಲ್ಲಿರುವ ರಾಜಗೋಪುರವು ೧೦೦ ಅಡಿ ಎತ್ತರವಿದೆ. ಇಡೀ ದೇವಾಲಯದ ಕಟ್ಟಡ ಕೆತ್ತನೆ ಕಲ್ಲಿನಿಂದ ಕೂಡಿದ್ದು ದ್ರಾವಿಡ ಶೈಲಿಯಲ್ಲಿದ್ದರೆ ವಿಮಾನ ಗೋಪುರಗಳು ಚೋಳರ  ಶೈಲಿಯಲ್ಲಿವೆ. ೧೭೨ ಸುಂದರ ಕೆತ್ತನೆಯ ಕಂಬಗಳನ್ನೊಂದಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ೧೦.೫ ಅಡಿ ಎತ್ತರದ ಕೃಷ್ಣ ಶಿಲೆಯ ಆಕರ್ಷಕ ಅಷ್ಟ ಭೈರವ ವಿಗ್ರಹಗಳನ್ನು ಗರ್ಭ ಗುಡಿಯ ಮುಂಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. ೪.೫ ಅಡಿ ಎತ್ತರದ ೬೪ ಅಷ್ಟಾಷ್ಟ ಭೈರವ ವಿಗ್ರಹಗಳಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಸರಪಳಿಗಳು, ಕಿಟಕಿಗಳನ್ನೂ ಸಹ ಕಲ್ಲಿನಲ್ಲಿಯೇ ಮೊನಚಾಗಿ ಕೆತ್ತಿರುವುದು ವಿಶೇಷವಾಗಿದೆ. ಇಷ್ಟೇ ಅಲ್ಲದೆ ಶ್ರೀ ಕ್ಷೇತ್ರದಲ್ಲಿ ವಿನೂತನವಾಗಿ ಬಿಂದು ಸರೋವರ, ಪುಷ್ಕರಣಿ ಹಾಗೂ ತಾವರೆ ಕೊಳಗಳನ್ನು ನಿರ್ಮಿಸಲಾಗಿದ್ದು ಕ್ಷೇತ್ರದಲ್ಲಿರುವ ಬಾರಿ ಬಂಡೆಗಳಿಗೂ ಸಹ ಮೂರ್ತ ರೂಪ ಕೊಡಲಾಗಿದೆ. ೨೩ ಅಡಿ ಎತ್ತರದ ಏಕಶಿಲಾ ನಾಗಲಿಂಗೇಶ್ವರ ಶಿವಲಿಂಗವನ್ನು ಕೆತ್ತಿಸಲಾಗಿರುವುದು ವೈಶಿಷ್ಟ್ಯವೇ ಆಗಿದೆ. ಮತ್ತೊಂದು ಬಂಡೆಯಲ್ಲಿ ಗಣಪತಿ ವಿಗ್ರಹದ ಕೆತ್ತನೆ ಕಾರ್ಯ ನಡೆದಿದೆ.
ಕಂಬದಮ್ಮ:
ಗಿರಿಯ ಹೆಬ್ಬಾಗಿಲನ್ನು ದಾಟಿದ ತಕ್ಷಣವೇ ಭಕ್ತಾದಿಗಳ ಗಮನವನ್ನು ಸೆಳೆಯುವವಳು ಗಿರಿಯ ಶಕ್ತಿದೇವತೆ ’ಕಂಬದಮ್ಮ. ಆದಿಶಕ್ತಿಯೇ ಸ್ಥಂಭರೂಪಳಾಗಿ ಇಲ್ಲಿ ನೆಲೆಸಿದ್ದಾಳೆ ಎಂಬುದಾಗಿ ಸ್ಥಳ ಮಹಾತ್ಮೆಯಿಂದ ತಿಳಿದುಬರುವುದು. ಆದಿಶಕ್ತಿಯು ಸ್ಥಂಭರೂಪಳಾಗಿರುವುದರಿಂದ ಭಕ್ತಾದಿಗಳು ಆಕೆಯನ್ನು ’ಕಂಬದಮ್ಮ ಎಂಬುದಾಗಿ ಕರೆದು, ಹರಕೆಯನ್ನು ಸಲ್ಲಿಸಿ ವಾದ್ಯ-ತಮಟೆಗಳ ಸಮೇತ ಶುಚಿರ್ಭೂತರಾಗಿ ದೇವಿಗೆ ಹೊಸ ಸೀರೆಯನ್ನು ಉಡಿಸಿ, ನೈವೇದ್ಯವನ್ನು ಅರ್ಪಿಸಿ, ಭಕ್ತಿಗೀತೆಯನ್ನು ಹಾಡುತ್ತ ಆರಾಸುವ ದೃಶ್ಯವಂತೂ ಚಿರಸ್ಮರಣೀಯ.
ಶ್ರೀ ಜ್ವಾಲಾಪೀಠ:
ಶಿವನು ತಪಸ್ಸಿಗೆ ಕುಳಿತ ಪವಿತ್ರವಾದ ಸ್ಥಳ ಅವನ ತೇಜಸ್ಸಿನ ಅಂಶದಿಂದ ಕೂಡಿರುವುದರಿಂದ ಈ ಪೀಠವು ’ಜ್ವಾಲಾಪೀಠ’ (ಅಗ್ನಿಪೀಠ) ಎಂಬ ಹೆಸರು ಪಡೆದಿದೆ. ಇದನ್ನು ಭಕ್ತರು ’ಉರಿಗದ್ದುಗೆ’ ಎಂತಲೂ ಕರೆಯುತ್ತಾರೆ. ಈಶ್ವರನಿಂದ ಸ್ಥಾಪಿತವಾದ ಪೀಠಗಳಲ್ಲಿ ಇದೇ ಮೊದಲನೆಯದಾದುದರಿಂದ ಇದಕ್ಕೆ ’ಆದಿ ಚುಂಚನಗಿರಿ ಪೀಠ’ವೆಂಬ ಹೆಸರು ಬಂದಿದೆ.
ಈಶ್ವರನು ಈ ಪೀಠವನ್ನು ಸಿದ್ಧಯೋಗಿಗೆ ಬಿಟ್ಟುಕೊಡುವಾಗ ತಾನೇ ಸ್ವತಃ ಇದರ ಮಹತ್ವವನ್ನು ಹೀಗೆ ವರ್ಣಿಸಿರುತ್ತಾನೆ. ಈ ಪೀಠವು ತನ್ನ ತೇಜೋ ಅಂಶಗಳಿಂದ ಕೂಡಿರುವ ಕಾರಣ ಇದು ಅಗ್ನಿಮಯವಾದುದಾಗಿದೆ. ಆ ಪೀಠಸ್ಥರಾದವರನ್ನು ದರ್ಶನ ಮಾಡಿದವರು ಜನ್ಮ ಪಡೆದುದಕ್ಕೆ ಸಾಫಲ್ಯವನ್ನು ಹೊಂದುತ್ತಾರೆ. ಯೋಗ ನಿಷ್ಠೆಯಿಲ್ಲದೆ ಈ ಅಗ್ನಿಪೀಠವನ್ನು ಯಾವನು ಸ್ಪರ್ಶ ಮಾಡುತ್ತಾನೋ ಅವನು ಕ್ಷಣದಲ್ಲಿಯೇ ಭಸ್ಮೀಭೂತನಾಗುತ್ತಾನೆ. ಮತ್ತು ಅದರ ದರ್ಶನ ಮಾಡಿದವರು ಸಕಲ ಪಾಪಗಳಿಂದ ಬಿಡಲ್ಪಟ್ಟವರಾಗುತ್ತಾರೆ. ಗದ್ದುಗೆಯಲ್ಲಿ  ಆರೂಢವಾಗಿರುವ ಗುರುಗಳ ದರ್ಶನವನ್ನು ಮಾಡಿದರೆ ಕೈಲಾಸದಲ್ಲಿ ಪರಶಿವನ ದರ್ಶನ ಮಾಡಿದಷ್ಟು ಪುಣ್ಯ ಲಭಿಸುತ್ತದೆ.
ಈ ಜ್ವಾಲಾ ಪೀಠವನ್ನು ಶ್ರೀ ಕ್ಷೇತ್ರಾಧ್ಯಕ್ಷರು ನವರಾತ್ರಿಯಂದು, ಮಹಾಶಿವರಾತ್ರಿಯಂದು ಮತ್ತು ಶ್ರೀ ಕ್ಷೇತ್ರದ ರಥೋತ್ಸವದ ದಿವಸದಂದು ಏರುತ್ತಾರೆ. ಆ ದಿನಗಳಲ್ಲಿ ಅಸಂಖ್ಯಾತ ಆಸ್ತಿಕ ಭಕ್ತಮಹಾಶಯರು ಭೇಟಿ ನೀಡಿ, ದರ್ಶನ ಪಡೆದು ಪುಣ್ಯಭಾಜನರಾಗುವರು.
ಬಿಂದು ಸರೋವರ :
ಶ್ರೀ ಮಠದ ದಕ್ಷಿಣ ದಿಕ್ಕಿನ ಸಮೀಪ ಬಿಂದು ಸರೋವರವಿದೆ. ಕಂಬದಮ್ಮ ಆದಿಶಕ್ತಿಯ ಪ್ರತಿನಿಯಾದರೆ ಇದು ಗಂಗಾದೇವಿಯ ಪ್ರತಿನಿ. ಸರೋವರವು ವಿಸ್ತಾರವಾಗಿಯೂ, ಆಳವಾಗಿಯೂ ಇದ್ದು ಸೋಪಾನಗಳಿಂದ ಕೂಡಿ, ಅನೇಕ ವಿಧವಾದ ಗಿಡಮರ ಬಳ್ಳಿಗಳಿಂದ ಆವೃತವಾಗಿ ರಮಣೀಯವಾಗಿದೆ. ಶಿವನ ಜಡೆಯಿಂದ ಬಂದ ಗಂಗಾಬಿಂದುವು ಈ ಸರೋವರದಲ್ಲಿ ಸೇರಿ ಹೋದ ಕಾರಣ ಇದಕ್ಕೆ ’ಬಿಂದು ಸರೋವರ’ ಎಂಬ ಹೆಸರು ಬಂದಿದೆ. ಸರೋವರದಲ್ಲಿ ಒಮ್ಮೆ ಸ್ನಾನ ಮಾಡಿ ಗಂಗಾದೇವಿಯನ್ನು ಅರ್ಚಿಸಿದರೂ ಸಾಕು, ಸಕಲ ರೋಗಗಳು ನಿವಾರಣೆಯಾಗುತ್ತವೆಂಬ ಭಾವನೆ ಭಕ್ತರ ಮನದಲ್ಲಿ ಬೇರೂರಿದೆ. ಗಂಗಾಧರೇಶ್ವರನ ಅಭಿಷೇಕಕ್ಕೆ ಈ ಸರೋವರದಿಂದಲೇ ಜಲವನ್ನು ತೆಗೆದುಕೊಂಡು ಹೋಗುವರು.
ಯಾತ್ರಿಕರು ಭಕ್ತಿಯಿಂದ ಈ ಸರೋವರವನ್ನು ಪ್ರದಕ್ಷಿಣೆ ಮಾಡಿ ಅಥವಾ ಇದರ ಜಲವನ್ನು ಸ್ಪರ್ಶಮಾಡಿ ಅಥವಾ ಇದರಲ್ಲಿ ಸ್ನಾನ ಮಾಡಿ ದೇವಋಷಿ ಪಿತೃತರ್ಪಣ ಮಾಡಿ,ದಕ್ಷಿಣೆ ಕೊಟ್ಟರೆ ಅಶ್ವಮೇಧ ಯಾಗದ ಫಲವನ್ನು ಪಡೆಯುತ್ತಾರೆಂದು ನಂಬಲಾಗಿದೆ. ಭಕ್ತಿಪೂರ್ವಕವಾಗಿ ಪರಶಿವನಿಗೆ ನಮಸ್ಕಾರ ಮಾಡುವವರು ಸಮಸ್ತ ಪಾಪಗಳಿಂದ ಮುಕ್ತರಾಗಿ, ಪರಿಶುದ್ಧರಾಗಿ ಅಂತ್ಯದಲ್ಲಿ  ಸ್ವರ್ಗವನ್ನು ಪಡೆಯುವರು. ಈ ಮಹಾ ಕ್ಷೇತ್ರವು ಅತಿಶಯ ಪುಣ್ಯದಾಯಕವಾಗಿ, ಕಾಶಿಗಿಂತಲೂ ಶ್ರೇಷ್ಠವಾದುದೆಂದು ಪುರಾಣ ಪುಣ್ಯ ಕಥೆಗಳಿಂದ ತಿಳಿದುಬರುತ್ತದೆ.
ಪಂಚಲಿಂಗಗಳು :
ಮಹೇಶ್ವರನು ಸಿದ್ಧಯೋಗಿಗೆ ತನ್ನ ಅಂಶಯುಕ್ತವಾದ ಈ ಕ್ಷೇತ್ರವನ್ನು ಬಿಟ್ಟುಕೊಟ್ಟು ಕೈಲಾಸಕ್ಕೆ ಹೋಗುವಾಗ ತನ್ನ ಸಾನ್ನಿಧ್ಯವನ್ನು ಬಯಸಿದ ಯೋಗಿಗೆ ’ನಾನು  ಪಂಚಲಿಂಗ’ ರೂಪದಲ್ಲಿ ಈ ಕ್ಷೇತ್ರದಲ್ಲಿ ಸದಾಕಾಲ ನೆಲೆಸಿರುತ್ತೇನೆ ಎಂದು ಹೇಳಿ ’ಗಂಗಾಧರೇಶ್ವರ’, ’ಕತ್ತಲೆ ಸೋಮೇಶ್ವರ’, ’ಚಂದ್ರಮೌಳೀಶ್ವರ’, ’ಗವಿಸಿದ್ಧೇಶ್ವರ’, ಮತ್ತು ’ಮಲ್ಲೇಶ್ವರ’ ಎಂಬ ಹೆಸರುಗಳಿಂದ ನೆಲೆಸಿರುವುದರಿಂದ ಈ ಕ್ಷೇತ್ರವು ’ದಕ್ಷಿಣ ಕಾಶಿ’ ಎಂದು ಪ್ರಸಿದ್ಧಿಯನ್ನು ಹೊಂದಿದೆ. ಕಾಶಿ ವಿಶ್ವನಾಥನ ದರ್ಶನ ಮಾಡಿದವರು ಶ್ರೀ ಕ್ಷೇತ್ರದ ಪಂಚಲಿಂಗಗಳ ದರ್ಶನ ಪಡೆಯದೇ ಹೋದಲ್ಲಿ ಪುಣ್ಯದಿಂದ ವಂಚಿತರಾಗುತ್ತಾರೆಂದು ಶೈವಪುರಾಣದಿಂದ ತಿಳಿದುಬರುತ್ತದೆ.
ಶ್ರೀ ಕತ್ತಲೆ ಸೋಮೇಶ್ವರಸ್ವಾಮಿ:
ಪಂಚಲಿಂಗಗಳಲ್ಲಿ ಕತ್ತಲೆ ಸೋಮೇಶ್ವರ ಲಿಂಗವು ಒಂದಾಗಿದ್ದು, ಬೃಹದಾಕಾರದ ಬಂಡೆಗಳ ನಡುವೆ ಇರುವ ಪ್ರಶಾಂತವಾದ ಹಾಗೂ ಕತ್ತಲೆಯ ಪ್ರದೇಶದಲ್ಲಿದೆ. ಮಧ್ಯಾಹ್ನದ ವೇಳೆಯಲ್ಲೂ  ಕತ್ತಲೆ ಸೋಮೇಶ್ವರ ಲಿಂಗವನ್ನು  ದರ್ಶನ ಮಾಡಬೇಕಾದರೆ ದೀಪದ ಸಹಾಯ ಬೇಕೇಬೇಕು.
ಶ್ರೀ ಗವಿಸಿದ್ಧೇಶ್ವರಸ್ವಾಮಿ:
ಬೆಟ್ಟದ ಕೋಡಿನ ಎತ್ತರದಲ್ಲಿ ಗವಿಸಿದ್ಧೇಶ್ವರ ದೇವಾಲಯವಿದೆ. ಪ್ರಕೃತಿ ಸಹಜವಾದ ಗವಿಯಲ್ಲಿ ಶಿವನು ಲಿಂಗಾಕೃತಿಯಲ್ಲಿ ನೆಲೆಸಿರುವವನಾದ್ದರಿಂದ ಗವಿಸಿದ್ಧೇಶ್ವರನೆಂದು ಕರೆಯುತ್ತಾರೆ. ಈ ಲಿಂಗದ ಪಕ್ಕ ಶಿವನ ವಾಹನವಾದ ನಂದಿಯನ್ನು ಪ್ರತಿನಿಸುವ ಸುಮಾರು ೧೦ ಕೆ.ಜಿ. ಗಾತ್ರದ ಬಸವನ ವಿಗ್ರಹವೊಂದು ಇದೆ. ಈ ಬಸವಮೂರ್ತಿಯನ್ನು ಎತ್ತುವುದಕ್ಕೆ ಉತ್ಸುಕರಾಗಿ ಲಕ್ಷಾಂತರ ಭಕ್ತಾದಿಗಳು ಬರುವರು. ಈ ಆಚರಣೆಯನ್ನು ’ಕಲ್ಲು ಸೇವೆ’ ಎಂಬುದಾಗಿ ಕರೆಯುವರು.
ಶ್ರೀ ಮಲ್ಲೇಶ್ವರಸ್ವಾಮಿ:
ಗಂಗಾಧರೇಶ್ವರ ದೇವಾಲಯಕ್ಕೆ ಹತ್ತಿ  ಹೋಗುವ ಸೋಪಾನ ಮಾರ್ಗದ ಬಲಗಡೆಯಲ್ಲಿ ಮಲ್ಲೇಶ್ವರ ಲಿಂಗವಿದೆ. ಪರಮಪೂಜ್ಯ ಶ್ರೀಶ್ರೀಗಳವರು ಇತ್ತೀಚೆಗೆ ಮಲ್ಲೇಶ್ವರ ಸ್ವಾಮಿಯ ದೇವಾಲಯವನ್ನು  ಜೀರ್ಣೋದ್ಧಾರ ಮಾಡಿದ್ದಾರೆ.
ಶ್ರೀ ಚಂದ್ರಮೌಳೀಶ್ವರ ದೇವಾಲಯ:
ಹಳೆಯ ಮಠಕ್ಕೆ ಸೇರಿದಂತೆ ಚಂದ್ರಮೌಳೀಶ್ವರ ಲಿಂಗದ ದೇವಾಲಯವಿದೆ. ಈ ಲಿಂಗವು ಶ್ರೀಗಳವರ ಆತ್ಮಾರ್ಥಲಿಂಗ. ಶ್ರೀಗಳವರು ಪ್ರತಿನಿತ್ಯ ತ್ರಿಕಾಲಗಳಲ್ಲಿಯೂ ಇಲ್ಲಿ ಅನುಷ್ಠಾನ ಮಾಡುತ್ತಾರೆ. ಈ ದೇವಾಲಯಕ್ಕೆ ಸೇರಿದ ೨೦ ಕಂಬಗಳ ಮಂಟಪದಲ್ಲಿ ಸುಪ್ರಸಿದ್ಧವಾದ ’ಜ್ವಾಲಾಪೀಠ’ ಅಥವಾ ’ಉರಿಗದ್ದಿಗೆ’ ಇದೆ. ಇದನ್ನು ’ಅಗ್ನಿಪೀಠ’ವೆಂದೂ ಕರೆಯುತ್ತಾರೆ. ಈ ಮಂಟಪಕ್ಕೆ  ಸೇರಿದಂತೆ ಪೂರ್ವಭಾಗದಲ್ಲಿ ಕಲ್ಲುಕಂಬಗಳ ಹಜಾರವಿದೆ. ಈ ಹಜಾರದ ಉತ್ತರ ಮೂಲೆಯಲ್ಲಿ ತಪೋ ಗುಹೆಗೆ ಪ್ರವೇಶದ್ವಾರವಿದೆ. ಇದು ಹಿಂದೆ ಅನೇಕ ಮಹಾತ್ಮರು ತಪಸ್ಸು ಮಾಡಿದ ಗುಹೆಯಾಗಿದೆ.
ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯ:
ಶ್ರೀ ಗಂಗಾಧರೇಶ್ವರನ ಆಶೀರ್ವಾದ ಪಡೆದ ಆರಣಿಯ ಪಾಳೇಗಾರರ ಬಗೆಗೆ ಮತ್ತು ಶ್ರೀ ಗಂಗಾಧರೇಶ್ವರ ದೇವಾಲಯದ ಬಗೆಗೆ ಒಂದು ಕಥೆ ಪ್ರಚಲಿತವಾಗಿದೆ. ಚುಂಚನಗಿರಿಯ ಸಮೀಪದಲ್ಲಿಯೇ ಹಿಂದೆ ಆರಣಿ ಎಂಬ ಪಾಳೆಯಗಾರರ ಸಂಸ್ಥಾನವಿತ್ತು. ಆ ಪಾಳೆಯಗಾರನಿಗೆ ಬಹುಕಾಲದವರೆಗೆ ಮಕ್ಕಳಿರಲಿಲ್ಲ. ಆಗ ಅವನು ಗಂಡು  ಸಂತಾನವಾದರೆ ಗಿಣ್ಣಿಲ್ಲದ ಬಿದಿರಿನಲ್ಲಿ ತೊಟ್ಟಿಲು ಮಾಡಿಸುತ್ತೇನೆಂದು ಹರಕೆ ಮಾಡಿಕೊಂಡನು. ಅಂತಹ ಬಿದಿರು ಚುಂಚನಗಿರಿಯಲ್ಲಿದೆಯೆಂದು ತಿಳಿದು, ಬಿದಿರನ್ನು ಕಡಿಯಲು ಮೇದರನ್ನು ಕಳುಹಿಸಿದನು. ಮೇದರು ಬಿದಿರನ್ನು  ಕಡಿಯಲು ಪ್ರಾಣವುಳ್ಳವರನ್ನು ಹನನ ಮಾಡಿದಂತೆ ರಕ್ತವು ಚಿಮ್ಮಿತು. ಮೇದರು ಭಯಭ್ರಾಂತರಾದರು. ಆಗ ಒಂದು ಅಶರೀರವಾಣಿಯು ಕೇಳಿ ಬಂತು. ’ನಾನು ಈಶ್ವರನು- ಚುಂಚನಕಟ್ಟೆ ಕ್ಷೇತ್ರವನ್ನು ಶ್ರೀರಾಮ ದೇವರಿಗೆ ಬಿಟ್ಟುಕೊಟ್ಟು, ಚುಂಚ-ಕಂಚರೆಂಬ ರಾಕ್ಷಸರನ್ನು ಸಂಹರಿಸುವುದಕ್ಕಾಗಿ ಇಲ್ಲಿಗೆ ಬಂದು ಅವರನ್ನು ಸಂಹರಿಸಿ ಈ ಬಿದಿರಿನ ನೆಳಲಲ್ಲಿ ನೆಲೆಸಿರುವೆನು.’ ಈ ವಿಷಯವನ್ನು ಪಾಳೆಗಾರರಿಗೆ ತಿಳಿಸಿ, ಒಂದು ದೇವಾಲಯವನ್ನು ಕಟ್ಟಿಸುವಂತೆ ಹೇಳಿ, ಮೇದರು ಹಿಂದುರುಗಿ ನೋಡದೆ ಹೋಗುವಂತೆ ಎಚ್ಚರಿಸಿತು. ಆದರೆ ಕುತೂಹಲವನ್ನು ತಾಳಲಾರದೆ ಮೇದರು ಹಿಂತಿರುಗಿ ನೋಡಿ ರಕ್ತಕಾರಿ ಸತ್ತರು. ಶ್ರೀ ಕ್ಷೇತ್ರದ ಸೋಪಾನದ ಪಕ್ಕದಲ್ಲಿರುವ ಮಂಟಪದಲ್ಲಿ ಈಗಲೂ ಆ ಮೇದರ ತಲೆಗಳಂತಿರುವ ಶಿಲೆಗಳನ್ನು ನೋಡಬಹುದು. ಇದು ಮೇದರ ಮಂಟಪವೆಂದೂ, ಮೇದರು ಹಿಂದಿರುಗಿ ನೋಡಿ ಅದರ ಮೇಲಿಂದ ಬಿದ್ದ ಬಂಡೆಯು ಮೇದರ ಕಲ್ಲು ಎಂದು ಪ್ರಸಿದ್ಧಿ ಪಡೆದಿದೆ. ಶ್ರೀ ಗಂಗಾಧರೇಶ್ವರನು ಸ್ವಯಂಭೂವಾಗಿ ಬಿದಿರಿನ ನೆಳಲಲ್ಲಿ ನೆಲೆಸಿದನೆಂಬುದರ ಗುರುತಾಗಿ ಗರ್ಭಗುಡಿಯಲ್ಲಿ ಶಿವಲಿಂಗದ ಮೇಲೆ ಈಗಲೂ ಬಿದಿರಿನ ತೊಟ್ಟಿಲನ್ನು ಕಟ್ಟಿದ್ದಾರೆ.
ಶ್ರೀ ಆಕಾಶ ಭೈರವ ಮತ್ತು ಚೇಳೂರ ಕಂಬ:
ಚುಂಚನಗಿರಿಯ ದಕ್ಷಿಣೋತ್ತರವಾಗಿ ಎರಡು ಶಿಖರಗಳಿವೆ. ಉತ್ತರಕ್ಕೆ ಇರುವ ಶಿಖರಕ್ಕೆ ’ಗಳಿಗೆಗಲ್ಲು ಎಂದು ಹೆಸರು. ಇದನ್ನು ಆಕಾಶಭೈರವನೆಂದು ಕರೆಯುತ್ತಾರೆ. ಕಾಶಿ ವಿಶ್ವನಾಥನ ರಥವನ್ನು ತನ್ನ ಜೇಬಿನಲ್ಲಿಟ್ಟುಕೊಂಡು, ಕದ್ದು ತಂದ ಭೈರವನನ್ನು ಹಿಡಿಯುವುದಕ್ಕಾಗಿ ವಿಶ್ವನಾಥನು ನಾಗರಾಜನನ್ನು ಕಳುಹಿಸಿದನಂತೆ. ತನ್ನನ್ನು ಹಿಂಬಾಲಿಸಿಕೊಂಡು ಬಂದ ಸರ್ಪರಾಜನ ಬರುವಿಕೆಯನ್ನ್ನು ಈ ಕಲ್ಲಿನ ಮೇಲೆ ನಿಂತು ನೋಡಿದ ಭೈರವ ಆತನನ್ನು ಸೋಲಿಸಿದ ಎಂಬುದಾಗಿ ತಿಳಿದು ಬರುತ್ತದೆ. ಬೆಟ್ಟದ ತಪ್ಪಲಲ್ಲಿ ನಿಂತು ತಲೆ ಎತ್ತಿ  ನೋಡಿದರೆ ಈ ಕಲ್ಲು ನಿಂತಿರುವುದೇ ದೇವ ದೇವನ ಮಾಯೆಯೋ ಎಂದು ಆಶ್ಚರ್ಯಪಡುವಂತಾಗುತ್ತದೆ. ಬೆಟ್ಟದ ತುದಿಯಲ್ಲಿರುವ ಈ ಕಲ್ಲು ಸುಮಾರು ೩೦೦ ಅಡಿಗಳಷ್ಟು ಎತ್ತರವಾಗಿದೆ.
ಈ ಕಲ್ಲನ್ನು ಹತ್ತುವುದು ಎಷ್ಟು ಕಷ್ಟವೋ ಅಷ್ಟೇ ಆನಂದ, ಸಂತೋಷ ಕಲ್ಲನ್ನು ಏರಿದ ಮೇಲೆ ಉಂಟಾಗುತ್ತದೆ. ಕಲ್ಲನ್ನು ಏರಿ ನೋಡಿದರೆ ಪ್ರಕೃತಿಯ ಚೆಲುವಿನ ಅನುಭವ ಭಕ್ತರಿಗಾಗುತ್ತದೆ. ಈ ರಮಣೀಯ ದೃಶ್ಯವನ್ನು ನೋಡುವುದಕ್ಕಾಗಿಯೇ ಕಲ್ಲನ್ನು ಹತ್ತಲು ಅನುಕೂಲವಾಗುವಂತೆ ಕಲ್ಲಿಗೆ ಸರಪಳಿಯನ್ನು ಬಿಗಿದಿದೆ. ಜಾತ್ರೆಯ ಕಾಲದಲ್ಲಿ ಹೆಂಗಸರೂ ಸಹ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು, ಸರಪಳಿ ಹಿಡಿದು ಈ ಕಲ್ಲೇರುವುದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ. ಅಷ್ಟು ಅಪಾಯಕಾರಿಯಾದ ಸ್ಥಳವಾಗಿದ್ದರೂ, ಇದುವರೆವಿಗೂ ಒಂದಾದರೂ ಅಪಾಯ ಸಂಭವಿಸದೆ ಪ್ರಕೃತಿಯ ಸೌಂದರ‍್ಯದ ಔತಣವನ್ನು ಭಕ್ತರು ಸವಿಯುತ್ತಿರಬೇಕಾದರೆ ಇದು ಭೈರವನ ಲೀಲೆಯಲ್ಲವೆ’
ದಕ್ಷಿಣ ಭಾಗದಲ್ಲಿರುವ ಶಿಖರಕ್ಕೆ ’ಚೇಳೂರು ಕಂಬ’ ಎಂಬ ಹೆಸರು ಇದೆ. ಇದರ ಸುತ್ತಲೂ ಹಳತಾದ ಬಂಡೆಗಳು ಒಡೆದು ಭಯಂಕರವಾದ ಗುಹೆಗಳಾಗಿವೆ. ಇದನ್ನು ಹತ್ತುವ ದಾರಿಯು ಸ್ವಲ್ಪ ಕಠಿಣವಾಗಿದೆ. ಇದರ ಬಗ್ಗೆ ಒಂದು ಕಥೆಯಿದೆ. ಪೂರ್ವದಲ್ಲಿ ಗಂಗಾಧರೇಶ್ವರ ಸ್ವಾಮಿಯ ಅರ್ಚಕರು ಇಲ್ಲಿಂದ ಚೇಳೂರು ಗ್ರಾಮಕ್ಕೆ ಹೋಗಿ ನೆಲಸಿದರಂತೆ. ಅವರು ಈಗಲೂ ರಥೋತ್ಸವ ಪೂಜೆಗೆ ಅಲ್ಲಿಂದ ಬರುತ್ತಾರೆ. ಉತ್ಸವ ಸಮಯಕ್ಕೆ ಈ ಕಂಬದ ಮೇಲೆ ದೀಪವನ್ನು ಹಚ್ಚುತ್ತಿದ್ದರಂತೆ. ಸಂಪ್ರದಾಯದ ಪ್ರಕಾರ ಈ ದೀಪದ ಪ್ರತಿಬಿಂಬವು ಚೇಳೂರಿನ ಐತಿಹಾಸಿಕ ಬಾವಿಯಲ್ಲಿ  ಕಾಣಿಸುವವರೆಗೆ ಯಾರೂ ಆಹಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಇಂದೂ  ಸಹ ಈ ಸಂಪ್ರದಾಯ ನಡೆಯುತ್ತಿದೆ. ಭಕ್ತರು ಈ ಕಂಬಕ್ಕೆ ಪೂಜೆ ಸಲ್ಲಿಸಿ, ಚಿನ್ನ ಬೆಳ್ಳಿಯಿಂದ ಮಾಡಿದ ಚೇಳು ಮೊದಲಾದ ಅಮೂಲ್ಯ ವಸ್ತುಗಳನ್ನು ಅರ್ಪಿಸುತ್ತಾರೆ. ಬರಬಹುದಾದ ವಿಘ್ನ ಇದರಿಂದ ಪರಿಹಾರವಾಗುವುದೆಂಬ ನಂಬಿಕೆಯಿದೆ.
ಕೂಗು ಬಂಡೆ:
ಗಿರಿಯನ್ನು ಉತ್ತರ ದಿಕ್ಕಿನಿಂದ ಬಳಸುತ್ತಾ  ’ಕಣಿವೆ ಹನುಮ’ನಿಗೆ ಕೈ ಮುಗಿದು ಬಲಕ್ಕೆ ತಿರುಗುವ ಕಾಲುದಾರಿಯಲ್ಲಿ ಮುಂದೆ ಹೋದರೆ, ಬೆಟ್ಟದ ಮಧ್ಯಭಾಗದ ತುದಿಯಲ್ಲಿ ’ಮೇದರ ಗುಡ್ಡ’ (ತೊಳಗಿನ ಕಿಬ್ಬ) ಎಂಬ ಸ್ಥಳದಲ್ಲಿ ನಿಂತು ಗಟ್ಟಿಯಾಗಿ ಮಾತನಾಡಿದರೆ ಪ್ರತಿಧ್ವನಿಯು ಬೆಟ್ಟದ ಪ್ರದೇಶದಿಂದ ಸ್ಪಷ್ಟವಾಗಿ ಕೇಳಿಬರುತ್ತದೆ. ದೂರದ ಬಂಡೆಗಳಲ್ಲಿ ಅಡಗಿಕೊಂಡು ಯಾರೋ ಸ್ಪಷ್ಟವಾಗಿ ಮರುಧ್ವನಿ ಕೊಡುವಂತೆ ಬರುವ ಪ್ರತಿಧ್ವನಿ ಎಲ್ಲರನ್ನೂ ಬೆರಗುಗೊಳಿಸುತ್ತದೆ.
ಕೂಗುಬಂಡೆಯ ಮುಂದೆ ಸಾಗಿದರೆ ಬೇಲದಕೆರೆ ಗ್ರಾಮಕ್ಕೆ ಹೋಗುವ ಮಾರ್ಗದ ಬಳಿ ಹೆಡೆ ಎತ್ತಿದ ಸರ್ಪದ ಆಕಾರದಲ್ಲಿರುವ ’ನಾಗರಕಲ್ಲು ಇದೆ. ಇದನ್ನು ನೋಡಿದವರಿಗೆ ಬಂಡೆ ಈ ಆಕಾರವನ್ನು ಹೇಗೆ ಹೊಂದಿತು ಎಂದು ಆಶ್ಚರ್ಯವಾಗುತ್ತದೆ. ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ’ಸಪ್ಪೆ ಸ್ವಾಮಿ ಗುಹೆ’ ಇದೆ. ಇಲ್ಲಿ ಒಬ್ಬ ಸಾಧು ಸಪ್ಪೆ ಅನ್ನವನ್ನು ಊಟ ಮಾಡುತ್ತಾ ವಾಸವಾಗಿದ್ದನೆಂದು ಹೇಳುತ್ತಾರೆ.
ಶ್ರೀ ಅನ್ನಪೂರ್ಣೇಶ್ವರಿ :
ಈ ವಿಗ್ರಹವು ಜ್ವಾಲಾಪೀಠದ ಹಿಂಭಾಗದಲ್ಲಿದೆ. ಜಗದಂಬೆ ಪಾರ್ವತಿಯು ಶ್ರೀ ಅನ್ನಪೂರ್ಣೇಶ್ವರಿಯಾಗಿ ಶ್ರೀ ಕ್ಷೇತ್ರದಲ್ಲಿ ನೆಲೆಸಿರುವುದರಿಂದ, ಈಕೆಯ ಅನುಗ್ರಹದಿಂದ ಈ ಮಠಕ್ಕೆ ಗುರುದರ್ಶನಕ್ಕಾಗಿ ಬರುವ ಸಮಸ್ತ ಭಕ್ತಾದಿಗಳಿಗೂ ವ್ಯಾಸಂಗ ಮಾಡುತ್ತಿರುವ ಸಹಸ್ರಾರು ಮಂದಿ ವಿದ್ಯಾರ್ಥಿಗಳಿಗೂ ನಿತ್ಯ ಅನ್ನದಾಸೋಹವು ನಡೆಯುತ್ತದೆ. ಪುರಾತನ ಕಾಲದಿಂದಲೂ ಈ ಮಠಕ್ಕೆ ’ಅನ್ನದಾನಿ ಮಠ’ ಎಂಬ ಹೆಸರು ಬರಲು ಅನ್ನಪೂರ್ಣೇಶ್ವರಿಯ ಮಹತ್ವವೂ ಕಾರಣವಾಗಿದೆ.
ಉತ್ಸವಗಳು:
ಆದಿಚುಂಚನಗಿರಿಯ ಪ್ರಥಮ ಪೀಠಾಕಾರಿಗಳಾದ ಸಿದ್ಧಯೋಗಿಯ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಗಂಗಾಧರೇಶ್ವರ, ಭೈರವೇಶ್ವರ, ಪಾರ್ವತಿ ದೇವಿ ಮೊದಲಾದ ದೇವರುಗಳಿಗೆ ಶೈವಾಗಮಶಾಸ್ತ್ರೋಕ್ತವಾಗಿ ನಿತ್ಯೋತ್ಸವ, ತೆಪ್ಪೋತ್ಸವ, ಮಾಸೋತ್ಸವ, ವರ್ಷೋತ್ಸವಗಳು ನಡೆಯುತ್ತವೆ. ಹಿಂದಿನ ಸಂಪ್ರದಾಯದಂತೆ ಈಗಿನ ಪೀಠಾಪತಿಗಳು ಶಿವರಾತ್ರಿ, ವಿಜಯದಶಮಿ, ಕಾಮನ ಹುಣ್ಣಿಮೆಗಳಲ್ಲಿ ಪೂಜಾಭಿಷೇಕವನ್ನು ನೆರವೇರಿಸುವರು. ಪ್ರತಿನಿತ್ಯ ವಿಶೇಷವಾದ ಅಭಿಷೇಕ, ಸಹಸ್ರ ನಾಮ ಪೂಜೆ ಮತ್ತು ಉತ್ಸವಗಳು ನಡೆಯುವುವು. ಮಹಾನವಮಿ, ಮಹಾಶಿವರಾತ್ರಿ ರಥೋತ್ಸವದಂದು ಪೀಠಾಪತಿಗಳು ಉಪವಾಸವಿದ್ದು, ಮಂಗಳ ಸ್ನಾನ ಮಾಡಿ ಕಿರೀಟ ಧಾರಣೆ ಮಾಡಿ ದಿವ್ಯ ವಸ್ತ್ರ ಪೀತಾಂಬರಗಳಿಂದ ಅಲಂಕೃತರಾಗಿ, ಸಮಸ್ತ ಬಿರುದು ಬಾವಲಿ ವಾದ್ಯಗಳ ಸಮೇತ ಪೀಠಾರೋಹಣ ಮಾಡಿ ಭಕ್ತ ಸಮೂಹಕ್ಕೆ ದರ್ಶನ ಕೊಟ್ಟ ಮೇಲೆ ಸಿದ್ಧ ಸಿಂಹಾಸನಾರೋಹಣ ಮಾಡುವರು. ಶಾಸ್ತ್ರೋಕ್ತ ರೀತಿಯಲ್ಲಿ ವಿಶೇಷ ಪೂಜೆ ನಡೆಯುವುದು. ಇದಲ್ಲದೆ ವಿಜಯದಶಮಿಯ ರಾತ್ರಿ ಪೂಜೆಗಾಗಿಯೂ, ಜಾತ್ರಾ ಕಾಲದಲ್ಲಿ ರಥಾರೋಹಣ ಪೂಜೆಗಾಗಿಯೂ ಪರಮಪೂಜ್ಯ ಮಹಾಸ್ವಾಮಿಗಳವರು ಪಾಲಕಿಯಲ್ಲಿ ಬಿಜಯಂ ಗೈಯುತ್ತಾರೆ.
ರಥೋತ್ಸವ:
ಶ್ರೀ ಕ್ಷೇತ್ರದಲ್ಲಿ ಮಹಾಶಿವರಾತ್ರಿ, ಗುರುಪೂರ್ಣಿಮೆ, ನವರಾತ್ರಿ, ಕಾರ್ತೀಕ ದೀಪಾರಾಧನ, ಸಂಕ್ರಾಂತಿ ಉತ್ಸವಗಳಿಗೆಲ್ಲಾ ತಿಲಕಪ್ರಾಯವಾಗಿ ಶ್ರೀ ಗಂಗಾಧರೇಶ್ವರ ಹಾಗೂ ಶ್ರೀ ಕಾಲಭೈರವೇಶ್ವರ ಸ್ವಾಮಿಯ ರಥೋತ್ಸವ ಜರಗುವುದು. ಪ್ರತಿ ವರ್ಷವೂ ಫಾಲ್ಗುಣ ಶುದ್ಧ ಪೂರ್ಣಿಮಾ ಅಂದರೆ ಕಾಮನ ಹುಣ್ಣಿಮೆಯ ದಿವಸ ರಾತ್ರಿ ಬ್ರಾಹ್ಮೀ ಮುಹೂರ್ತದಲ್ಲಿ   ನಗಾರಿ, ಭೇರಿತಾಡನ ಮತ್ತು ವಾದ್ಯ ಘೋಷಗಳಿಂದ ಅತ್ಯಂತ ವೈಭವಯುತವಾಗಿ ಆಚರಿಸಲ್ಪಡುತ್ತದೆ.
ಎಂದೂ ಗುರುವ ಕಾಣಲಿಲ್ಲಾ, ಗುರುವಿನ ಪಾದ ಕಾಣಲಿಲ್ಲ ; ಎಂದು ಹಾಡಿ ಹರಸುತ್ತಾ ರಥವು ಹರಿದು ಬರುವುದು. ಹಿಂದಿನ ಎಂಟು ದಿವಸಗಳು ನಡೆಯುವ ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳದ ಭಕ್ತಾದಿಗಳು ತೇರೊಪ್ಪತ್ತಿಗಾಗಿ ಮನೆಮಂದಿ ಸಮೇತ ಆಗಮಿಸಿ ಬೆಟ್ಟದ ತಪ್ಪಲಲ್ಲಿ ಬೀಡು ಬಿಟ್ಟಿರುತ್ತಾರೆ.
ಆದಿಚುಂಚನಗಿರಿಯ ತೇರು ಮುಂಜಾನೆ ೪ ಗಂಟೆಗೆ ಹರಿಯಲು ಕಾರಣ ಹೇಳುವ ಜಾನಪದ ಕಥೆಯೊಂದಿದೆ. ಭೈರವ ಒಮ್ಮೆ ತನ್ನ ಭಾವನಾದ ತಿಮ್ಮಪ್ಪನನ್ನು ನೋಡಿಕೊಂಡು ಬರಲು ತಿರುಪತಿಗೆ ಹೋದನು. ಕುಶಲೋಪರಿಗಳೆಲ್ಲಾ ಮುಗಿದ ಮೇಲೆ ಭಾವನ ಜೊತೆ ಪಗಡೆಯಾಡಿ,  ಸೋತ ಭೈರವ, ತಿಮ್ಮಪ್ಪನಿಂದ ಸೆರೆಮನೆಗೆ ಹಾಕಲ್ಪಟ್ಟ. ಇದರಿಂದ ಕುಪಿತನಾದ ಭೈರವ ಸೆರೆಮನೆಯಿಂದ ಹೇಗೊ ಪಾರಾಗಿ, ಹಿಂದಿರುಗುವಾಗ ತಿಮ್ಮಪ್ಪನ ತೇರನ್ನು ಹೊತ್ತು ತಂದ. ಬೆಳಗಿನಲ್ಲಿ ಬಂದ ತಿಮ್ಮಪ್ಪ ಭಾವಮೈದುನನಾದ ಭೈರವನೊಡನೆ ಬೆರೆಯದೆ, ಹಬ್ಬಕ್ಕೆ ಬಂದ ನೆಂಟನಂತೆ ತೇರೊಪ್ಪತ್ತಿನಲ್ಲಿ ಭಾಗವಹಿಸಿ, ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗಿದ.
ರಥೋತ್ಸವದಂದು ಚುಂಚನಗಿರಿಯಲ್ಲಿ ಕತ್ತಲಾಗುವುದಿಲ್ಲ. ದೊಡ್ಡವರು, ಸಣ್ಣ ಮಕ್ಕಳೂ ಸಹ ಕಣ್ಣು ಮುಚ್ಚುವುದಿಲ್ಲ. ಭಕ್ತರು ಕೋಲಾಟ, ಸೋಬಾನೆ ಪದಗಳು, ತಮಟೆ ಪದಗಳು, ನಂದಿಕೋಲು ಕುಣಿತ, ಕೀಲುಕುದುರೆ ನೃತ್ಯ, ಬಾಣಬಿರುಸುಗಳ ವೈಭವಗಳೊಡನೆ ರಾತ್ರಿ ಕಾಲ ಕಳೆಯುತ್ತಾರೆ. ಹೂವಿನ ಪಾಲಕಿಯಲ್ಲಿ ಜಗದ್ಗುರುಗಳು ಆಗಮಿಸಿ, ಪೂಜೆ ಸಲ್ಲಿಸಿದ ಮೇಲೆ, ಹಾಲಿನಂತೆ ಚೆಲ್ಲಿರುವ ಬೆಳದಿಂಗಳಲ್ಲಿ, ಭಕ್ತರು ತಮ್ಮ  ಕಪ್ಪಕಾಣಿಕೆಗಳನ್ನು ಸಲ್ಲಿಸಿ, ಹರಕೆಯನ್ನರ್ಪಿಸಿ, ವಿಜೃಂಭಣೆಯಿಂದ ಅಲಂಕರಿಸಿದ ತೇರನ್ನು ಎಳೆಯುತ್ತಾರೆ.
ಪುರಾಣದಲ್ಲಿ ಉಕ್ತವಾಗಿರುವಂತೆ ಶ್ರೀ ಆದಿಚುಂಚನಗಿರಿ ಪೀಠವು ಸ್ಥಾಪನೆಯಾದುದು ತ್ರೇತಾಯುಗದಲ್ಲಿ. ಪರಮೇಶ್ವರನೇ ಈ ಪೀಠದ ಸ್ಥಾಪಕನು. ಈ ಮಠದ ಗುರುಪರಂಪರೆಯು ಸುದೀರ್ಘವಾದುದು. ಇದುವರೆಗೆ  ೭೧ ಧರ್ಮ ಗುರುಗಳು ಪೀಠಾಪತಿಗಳಾಗಿದ್ದಾರೆ. ೧೯೨೪ರಲ್ಲಿ ಶ್ರೀ ಮಠವು ಒಕ್ಕಲಿಗರ ಕೈಗೆ ಬಂದ ಮೇಲೆ, ಜನಾಂಗದ ಭಕ್ತರೆಲ್ಲರೂ ಸೇರಿ ೧೯೨೮ರಲ್ಲಿ ಪಾಂಡವಪುರ ಸಮೀಪದ ದರಸಗುಪ್ಪೆ ಗ್ರಾಮದ ಗುರು ರಾಮಯ್ಯ ಅವರನ್ನು, ಭಕ್ತನಾಥ ಸ್ವಾಮಿಗಳೆಂಬ ನಾಮಧೇಯವನ್ನಿತ್ತು, ಸಿದ್ಧ ಸಿಂಹಾಸನದ ಪೀಠಾಕಾರಿಗಳನ್ನಾಗಿ ಪಟ್ಟಾಭಿಷೇಕ ಮಾಡಿದರು. ಇದಕ್ಕೆ ಆಗಿನ ಮೈಸೂರು ಶ್ರೀ ಮನ್ಮಹಾರಾಜರು ಅಂಗೀಕಾರವನ್ನಿತ್ತರು. ಇವರು ೪೦ ವರ್ಷಗಳ ಕಾಲ ಕ್ಷೇತ್ರದ ಯಶಸ್ಸನ್ನು ಸಾಸಿ, ಶಿವೈಕ್ಯರಾದರು. ೧೯೬೭ರಲ್ಲಿ ತಮ್ಮ ಉತ್ತರಾಕಾರಿಗಳಾಗಿ ವಿದ್ವಾಂಸರೂ, ಸಾಧು ಶ್ರೇಷ್ಠರೂ ಆದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳವರನ್ನು ನೇಮಿಸಿದರು. ಇವರು ಕ್ಷೇತ್ರದ ಪುರೋಭಿವೃದ್ಧಿಯ ಕಡೆಗೆ ತಮ್ಮ ಗಮನ ಹರಿಸಿ, ಶ್ರೀ ಮಠದಲ್ಲಿ ಮಾಧ್ಯಮಿಕ ಶಾಲೆ ಮತ್ತು ಉಚಿತ ವಿದ್ಯಾರ್ಥಿನಿಲಯಗಳನ್ನು ತೆರೆದರು. ಇವರ ನಂತರ ಶ್ರೀ ರಾಮಾನಂದನಾಥ ಸ್ವಾಮಿಗಳವರು ಪೀಠಾಕಾರಿಗಳಾದರು. ಇವರು ವೃದ್ಧರಾಗಿದ್ದು, ಕ್ಷೇತ್ರದ ಎಲ್ಲಾ  ಕಾರ್ಯಗಳನ್ನು ನಿರ್ವಹಿಸುವುದು ಕಷ್ಟವಾಗಿ, ಈಗಾಗಲೇ ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದ್ದ   ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳವರ ಕಾರ್ಯದಕ್ಷತೆ, ಸೇವಾ ಮನೋಭಾವ, ಸೌಮ್ಯ ಸ್ವಭಾವ, ಆತ್ಮಚಿಂತನೆ, ಸಂಘಟನಾ ಶಕ್ತಿ ಮುಂತಾದ ಸದ್ಗುಣಗಳನ್ನು ಗಮನಿಸಿ, ಮುಂದಿನ ಪೀಠಾಕಾರಿಗಳೆಂದು ಉಯಿಲನ್ನು ಬರೆದಿಟ್ಟು ೧೯೭೪ರಲ್ಲಿ ಶಿವೈಕ್ಯರಾದರು. ತರುವಾಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥಮಹಾ ಸ್ವಾಮಿಗಳವರು ಶ್ರೀ ಕ್ಷೇತ್ರದ ಸಿದ್ಧ ಸಿಂಹಾಸನಾಶರಾದರು. ಅಂದಿನಿಂದಲೇ ಶ್ರೀ ಕ್ಷೇತ್ರದ ಸುವರ್ಣಯುಗ ಆರಂಭವಾಯಿತು.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪರಮಪೂಜ್ಯ ಜಗದ್ಗುರು
ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರು

ಬೆಂಗಳೂರು ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿಯ ಸಮೀಪ ಸುಮಾರು ೩ ಕಿ.ಮೀ. ದೂರದ ಬಾನಂದೂರಿನಲ್ಲಿ ಶ್ರೀಗಳವರು ಜನ್ಮ ತಾಳಿದರು. ಶ್ರೀಮಠದ ಭಕ್ತರಾದ ಸುಭೇದಾರ ಮನೆತನದ ಸರಳ ಜೀವಿಗಳೂ ಸಾತ್ವಿಕರೂ, ಸುಸಂಸ್ಕೃತರೂ, ಗೌರವಾನ್ವಿತರೂ ಆದ ಶ್ರೀ ಚಿಕ್ಕಲಿಂಗಪ್ಪ ಮತ್ತು ಪತ್ನಿ ಶ್ರೀಮತಿ ಬೋರಮ್ಮ ದಂಪತಿಗಳಿಗೆ ಶ್ರೀ ಪುಟ್ಟಸ್ವಾಮಯ್ಯ, ಶ್ರೀಮತಿ ಹನುಮಕ್ಕ, ಶ್ರೀ ಗಂಗಾಧರಯ್ಯ, ಶ್ರೀಮತಿ ಪುಟ್ಟಲಿಂಗಮ್ಮ, ಶ್ರೀ ಮರಿಸ್ವಾಮಯ್ಯ ಮತ್ತು ಶ್ರೀಮತಿ ಶಿವಮ್ಮರೆಂಬ ಆರುಮಂದಿ ಮಕ್ಕಳಿದ್ದರು, ಇವರಿಗೆ ಗಂಗಾಧರೇಶ್ವರ ಮತ್ತು ಸ್ತಂಭಾಂಬೆ ಮನೆದೇವರಾಗಿದ್ದು, ಆದಿಚುಂಚನಗಿರಿಯ ಭಕ್ತರು. ಇವರು ಶಿಪೋಪಾಸಕರೂ ಸದ್ಗುಣ ಸಂಪನ್ನರೂ, ಧರ್ಮಪ್ರವೃತ್ತಿಯುಳ್ಳವರೂ, ದೈವಭಕ್ತರೂ, ಸದಾಚಾರ ನಿಷ್ಠರೂ ವಿಚಾರಪರರೂ ಆಗಿ ಸಾತ್ವಿಕ ಜೀವನವನ್ನು ನಡೆಸುತ್ತಿದ್ದರು. ಚಿಕ್ಕಲಿಂಗಪ್ಪನವರಿಗೆ ಪುಟ್ಟಸ್ವಾಮಯ್ಯ ಮತ್ತು ಹನುಮಕ್ಕ ಜನಿಸಿದ ಮೇಲೆ ಬಹಳ ಕಾಲ ಮಕ್ಕಳಾಗಲಿಲ್ಲ. ಒಂದೇ ಗಂಡುಮಗುವಿದ್ದುದರಿಂದ ಚಿಂತೆಗೊಳಗಾಗಿ, ಮತ್ತೊಂದು ಗಂಡು ಮಗುವಿಗಾಗಿ ಶ್ರೀ ಆದಿಚುಂಚನಗಿರಿಯ ಗಂಗಾಧರೇಶ್ವರನಿಗೆ ಹರಕೆ ಹೊತ್ತರು. ವಿಶೇಷ ಪೂಜೆಗಳನ್ನು ಸಲ್ಲಿಸಿ, ಶ್ರೀ ಕ್ಷೇತ್ರಕ್ಕೆ ಅನೇಕ ಬಾರಿ ಯಾತ್ರೆಯನ್ನೂ ಕೈಗೊಂಡರು.
ಗಂಗಾಧರೇಶ್ವರನ ಕೃಪೆಯಿಂದ ದಿನಾಂಕ ೧೮-೧-೧೯೪೫ನೇ ಗುರುವಾರ ಬೆಳಗಿನ ಜಾವ ೪-೪೪ ಗಂಟೆಗೆ ಶ್ರೀ ಗಂಗಾಧರಯ್ಯ ಜನ್ಮ ತಾಳಿದರು. ಇವರ ತಾತ ತಿಮ್ಮೇಗೌಡರು ಮಗುವಿನ ಸುಂದರ ಮುಖದ ತೇಜಸ್ಸನ್ನು ಗಮನಿಸಿ ಯಾವ ಪಂಚಾಂಗವನ್ನೂ ನೋಡದೇ ಇವರು ಮಠಾಪತಿಗಳಾಗುತ್ತಾರೆ; ಜಗದ್ಗುರುಗಳಾಗುತ್ತಾರೆಂದು ಹೇಳಿದರು. ಗಂಗಾಧರೇಶ್ವರನ ಅನುಗ್ರಹದಿಂದ ಜನಿಸಿದ ಮಗುವಿಗೆ ಗಂಗಾಧರನೆಂದೇ ನಾಮಕರಣ ಮಾಡಿದರು.   ಒಂದು ದಿನ ತೇಜಸ್ವಿಯಾದ ಒಬ್ಬ ಸಾಧು ಮನೆಗೆ ಬಂದು, ಮಗುವಿನ ದೈವ ಲೀಲೆಯನ್ನು ಕಂಡು, ಇದು ಕಾರಣಿಕ ಶಿಶು; ಮುಂದೆ ಮಹಾತ್ಮನಾಗುವನು, ಇವನಿಂದ ಲೋಕ ಕಲ್ಯಾಣವಾಗುತ್ತದೆ. ಎಂದು ಹೇಳಿ, ಭಿಕ್ಷೆಗೂ ಕಾಯದೆ ಹೊರಟು ಹೋದನು.
ಬಾಲ್ಯದಲ್ಲಿ ಹೆಚ್ಚು ಕಾಲ ತಾತನವರಾದ ತಿಮ್ಮೇಗೌಡರ ಬಳಿಯಲ್ಲಿಯೇ ಕಳೆಯುತ್ತಿದ್ದುದರಿಂದ ಅವರ ಆದರ್ಶಗುಣಗಳೆಲ್ಲಾ ಇವರಲ್ಲಿ ಪ್ರತಿಬಿಂಬಿಸಿದವು. ಐದು ವರ್ಷಗಳು ಕಳೆದ ನಂತರ ಗಂಗಾಧರಯ್ಯನವರ ವಿದ್ಯಾಭ್ಯಾಸ ಬಾನಂದೂರಿನ ಪ್ರಾಥಮಿಕ ಶಾಲೆಯಲ್ಲಿಯೇ ಪ್ರಾರಂಭವಾಯಿತು. ಇವರು ಅಧ್ಯಾಪಕರ ಕಣ್ಮಣಿಯಾಗಿ, ವಿದ್ಯಾರ್ಥಿಗಳ ಮೆಚ್ಚಿನ ಮಿತ್ರನಾಗಿ, ಆಟಪಾಠಗಳಲ್ಲಿ ಆದರ್ಶವ್ಯಕ್ತಿಯಾಗಿ ಅಧ್ಯಯನದಲ್ಲಿ  ತೊಡಗಿದರು, ಇವರ ವಿಷಯಗ್ರಹಣ ಶಕ್ತಿಯನ್ನು ಕಂಡ ಅಧ್ಯಾಪಕರು ಬೆರಗಾದರು. ಮನೆಯಲ್ಲಿ ತಾತನಿಂದ ಲೌಕಿಕ, ಅಧ್ಯಾತ್ಮಿಕ, ಜ್ಯೋತಿಷ ಮತ್ತು ವೈದ್ಯಕೀಯ ವಿಚಾರಗಳನ್ನು ಗಂಗಾಧರಯ್ಯನವರು ಸಂಗ್ರಹಿಸುತ್ತಿದ್ದರು.
ಪ್ರಾಥಮಿಕ ವಿದ್ಯಾಭ್ಯಾಸ ಮುಗಿದ ನಂತರ ವಿವಿಧೋದ್ದೇಶ ಪ್ರೌಢ ಶಾಲೆಗಳಲ್ಲಿ ಅಧ್ಯಯನ ಮಾಡಿ, ೧೯೬೩ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಮುಂದೆ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್‌ಸಿ. ಪದವಿ ಪಡೆದರು. ಇವರಿಗೆ ದೇಶ ಸೇವೆಯಲ್ಲಿ ಅತೀವ ಆಸಕ್ತಿಯಿದ್ದಿತು; ರಾಷ್ಟ್ರ ಪ್ರೇಮಿಯಾಗಿದ್ದರು. ಬೆಂಗಳೂರಿನ ಹಲವು ಆಶ್ರಮಗಳಿಗೆ ಆಗಾಗ ಭೇಟಿ ನೀಡಿ, ಸಾಧುಗಳೊಡನೆ ಅಧ್ಯಾತ್ಮಿಕ ಚರ್ಚೆ ನಡೆಸುತ್ತಿದ್ದರು. ಇವರ ಅಧ್ಯಾತ್ಮಿಕ ಚಿಂತನೆ ಗಾಢವಾಗಿ, ಕೊನೆಗೆ ಅಧ್ಯಾತ್ಮದ ಕಡೆಗೆ ಪಯಣ ಬೆಳೆಸಿದರು.
ಶ್ರೀ ಆದಿಚುಂಚನಗಿರಿಯ ಸುಪ್ರಸಿದ್ಧವಾದ ಪುಣ್ಯಕ್ಷೇತ್ರದ ೭೦ನೆಯ ಗುರುಗಳಾದ ಶ್ರೀ ಶ್ರೀ ರಾಮಾನಂದನಾಥ ಸ್ವಾಮಿಗಳವರು ವಯೋವೃದ್ಧರೂ, ಜ್ಞಾನವೃದ್ಧರೂ ಆಗಿದ್ದು, ವೃದ್ಧಾಪ್ಯದಲ್ಲಿ ಅನಾರೋಗ್ಯಕ್ಕೆ ತುತ್ತಾದರು. ಶ್ರೀಮಠದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬಲ್ಲ ದಯೆ, ಅನುಕಂಪ, ಉಪಕಾರಬುದ್ಧಿ, ಲೋಕಸೇವೆ, ಆತ್ಮಚಿಂತನೆ ಮುಂತಾದ ಸದ್ಗುಣಗಳಿಂದ ಕೂಡಿದ್ದ ಶ್ರೀ ಗಂಗಾಧರಯ್ಯನವರನ್ನು ಪೂಜ್ಯ ಶ್ರೀ ರಾಮಾನಂದನಾಥ ಸ್ವಾಮಿಗಳು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, ವಿಧ್ಯುಕ್ತವಾಗಿ ದೀಕ್ಷೆ ಕೊಟ್ಟು, ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳವರೆಂಬ ಸನ್ಯಾಸಾಶ್ರಮದ ನಾಮಧೇಯವನ್ನಿತ್ತರು. ಸನ್ಯಾಸಿಗಳು ಭಾರತೀಯ ಧರ್ಮ ಮತ್ತು   ಸಂಸ್ಕೃತಿಗಳನ್ನು   ಚೆನ್ನಾಗಿ ಬಲ್ಲವರಾಗಿರಬೇಕು. ವೇದಾಂತಾದಿ ಶಾಸ್ತ್ರಗಳನ್ನು   ತಿಳಿದಿರಬೇಕು. ಸಂಸ್ಕೃತ ಅಧ್ಯಯನ ಮಾಡದೆ ಈ ಜ್ಞಾನವನ್ನು ಸಮರ್ಪಕವಾಗಿ ಪಡೆಯುವುದು ಅಸಾಧ್ಯವೆಂದು ತಿಳಿದ ಶ್ರೀ ರಾಮಾನಂದನಾಥಸ್ವಾಮಿ ಗಳವರು, ಶ್ರೀ ಬಾಲಗಂಗಾಧರನಾಥ ಸ್ವಾಮಿಗಳವರನ್ನು ಬೆಂಗಳೂರಿನ ಕೈಲಾಸಾಶ್ರಮಕ್ಕೆ ಕಳುಹಿಸಿದರು.
ಶ್ರೀಗಳವರು ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಸರ್ಕಾರಿ ಸಂಸ್ಕೃತ ಮಹಾಪಾಠ ಶಾಲೆಯಲ್ಲಿ  ಅದ್ವೆ ತ ಶಾಸ್ತ್ರವನ್ನು ಅಧ್ಯಯನ ಮಾಡಿದರು. ಈ ಮಧ್ಯೆ ಅನಾರೋಗ್ಯದಿಂದ
ಬಳಲುತ್ತಿz ಶ್ರೀ ಶ್ರೀ ರಾಮಾನಂದನಾಥ ಮಹಾಸ್ವಾಮಿಗಳವರು ಶಿವೈಕ್ಯರಾದರು. ಇವರ ಸದಿಚ್ಛೆಯಂತೆ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳವರು ಶ್ರೀಮಠದ ಉತ್ತರಾಕಾರಿಗಳಾದರು. ಶ್ರೀ ಕ್ಷೇತ್ರದ ಸಂಪ್ರದಾಯದಂತೆ ಅವರಿಗೆ ಕಿರೀಟಧಾರಣೆ ಮಾಡಲಾಯಿತು.
ದಿನಾಂಕ ೨೪-೯-೧೯೭೪ರ ಶುಭದಿನದಂದು ಪರಮ ಪೂಜ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ನೂತನ ಧರ್ಮಗುರುಗಳು ಸಿದ್ಧ ಸಿಂಹಾಸನಾರೋಹಣ ಮಾಡಿದರು. ಅಂದಿನಿಂದ ಆದಿಚುಂಚನಗಿರಿಯ ಪ್ರಗತಿಯ ಶಕೆಯು ಆರಂಭವಾಯಿತು.
ಶ್ರೀಗಳವರ ಪಟ್ಟಾಭಿಷೇಕವಾದಾಗ, ಮಠದ ಪರಿಸ್ಥಿತಿಯು ತೀರಾ ಹದಗೆಟ್ಟಿತ್ತು. ಹಣವಿಲ್ಲದೆ ಆಶ್ರಮದ ವಿದ್ಯಾರ್ಥಿಗಳಿಗೆ ಮತ್ತು ಶ್ರೀಮಠಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ನೀಡುವುದು ಅಸಾಧ್ಯವಾಗಿ ತೋರಿತು. ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ದಾಸೋಹಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಇವರ ಪಾಲಿಗೆ ಬಂದಿತು. ಶ್ರೀಗಳು ವ್ಯವಸಾಯದ ಕಡೆಗೆ ಗಮನ ಹರಿಸಿ, ತಾವೇ ಸ್ವತಃ ಟೊಂಕ ಕಟ್ಟಿ ನಿಂತು, ಉತ್ತು, ಬಿತ್ತಿ, ಬೆಳೆದ ಪೈರಿಗೆ ನೀರು ಹಾಯಿಸಿ, ದವಸ ಧಾನ್ಯ ಬೆಳೆಯಲು ಪ್ರಾರಂಭಿಸಿದರು. ತಾವು ಜಗದ್ಗುರುಗಳೆಂಬುದನ್ನು ಮರೆತು ಕರ್ಮಯೋಗಿಯಾಗಿ ಕಂಗೊಳಿಸಿದರು. ನಂತರ  ಪ್ರವಾಸ ಕೈಗೊಂಡು ಭಕ್ತಾದಿಗಳಿಂದ ಧಾನ್ಯ ಸಂಗ್ರಹಿಸಲು ಪ್ರಾರಂಭಿಸಿದರು. ಇದರಿಂದ ಮಠದ ಪರಿಸ್ಥಿತಿ ಸ್ವಲ್ಪ ಸುಧಾರಿಸತೊಡಗಿತು. ಕರ್ಮ ತ್ಯಾಗವು ಸನ್ಯಾಸವಲ್ಲ: ಕರ್ಮಫಲ ತ್ಯಾಗವು ಸನ್ಯಾಸವೆಂಬುದನ್ನು ಶ್ರೀಗಳವರು ಮಾಡಿ ತೋರಿಸಿದರು.
ಪರಮಪೂಜ್ಯ ಯೋಗಿ ವರ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಆಯಸ್ಕಾಂತದಂತೆ ಪ್ರಪಂಚದ ಸಮಸ್ತ  ಜನರನ್ನು ತಮ್ಮೆಡೆಗೆ ಆಕರ್ಷಿಸಿಕೊಂಡರು. ಶ್ರೀ ಕ್ಷೇತ್ರದ ಪ್ರಗತಿಗೆ ಯೋಜನೆಗಳನ್ನು ರೂಪಿಸಿ, ಶತಮಾನದಲ್ಲಿ ಸಾಸಲಾಗದ್ದನ್ನು ದಶಕಗಳಲ್ಲಿ ಸಾಸಿ ಪವಾಡ ಮೆರೆದ ಕರ್ಮಯೋಗಿಗಳವರು. ಶ್ರೀಮಠದ ಸರ್ವತೋಮುಖವಾದ ಪ್ರಗತಿಯನ್ನು ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ  ಸಾಸುತ್ತಿದ್ದು, ಅದರ ಯಶಸ್ಸಿಗಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಶ್ರೀಗಳವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ನಮ್ಮದು ಹಳ್ಳಿಗಳ ನಾಡು. ಗ್ರಾಮಾಂತರ ಪ್ರದೇಶದ ಮಕ್ಕಳು ವಿದ್ಯಾವಂತರಾಗದಿದ್ದರೆ ಪ್ರಗತಿ ಸಾಧ್ಯವಿಲ್ಲವೆಂಬುದನ್ನು ಅರಿತ ಶ್ರೀಗಳು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾಸಂಸ್ಥೆಗಳನ್ನು   ತೆರೆದು ಜನತೆಯ ಅಭ್ಯುದಯಕ್ಕೆ ನಾಂದಿ ಹಾಡಿದ್ದಾರೆ.
ಪ್ರಥಮವಾಗಿ ಶ್ರೀ ಕ್ಷೇತ್ರದಲ್ಲಿ ಕಾಲಭೈರವೇಶ್ವರ ಸಂಸ್ಕೃತ ವೇದ-ಆಗಮ ಮಹಾಪಾಠಶಾಲೆಯನ್ನು ತೆರೆದು, ಜಾತಿ, ಮತಭೇದವಿಲ್ಲದೆ ಅಲ್ಲಿ ಎಲ್ಲರೂ ಅಧ್ಯಯನ ಮಾಡುವಂತೆ ಅವಕಾಶ ಕಲ್ಪಿಸಿ, ಧರ್ಮ ಮತ್ತು ಸಂಸ್ಕೃತಿಗಳ ಪ್ರಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ವರ್ಗ, ವರ್ಣಗಳ ಭೇದಭಾವ ಈ ಮಹಾಸಂಸ್ಥಾನ ಮಠಕ್ಕಿಲ್ಲ. ಮಹಾಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ಒಂದು ಶಿಕ್ಷಣ ಟ್ರಸ್ಟನ್ನು ರಚಿಸಿ, ದೇಶದ ನಾನಾ ಭಾಗಗಳಲ್ಲಿ ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ತೆರೆದಿದ್ದಾರೆ. ಶ್ರೀಗಳವರು ಶಿಶುವಿಹಾರದಿಂದ ಪ್ರಾರಂಭಿಸಿ, ಪದವಿ ತರಗತಿಗಳು, ತಾಂತ್ರಿಕ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳವರೆಗೆ ೪೫೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ.
ಗ್ರಾಮಾಂತರ ಪ್ರದೇಶದ ಮಕ್ಕಳು ವಿದ್ಯಾವಂತರಾಗದೆ, ಗ್ರಾಮೀಣರು ತಮ್ಮ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲವೆಂದು ಭಾವಿಸಿ, ಕೃಷಿ, ರೇಷ್ಮೆ, ತೋಟಗಾರಿಕೆ, ಎಲೆಕ್ಟ್ರಿಕಲ್ ವೈರಿಂಗ್ ಮುಂತಾದ ವೃತ್ತಿಪರ ಶಿಕ್ಷಣಕ್ಕೂ ಹೆಚ್ಚು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಉದ್ಯೋಗಾವಕಾಶ, ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೆ ಶಿಕ್ಷಣ ಅಗತ್ಯವೆಂದೂ, ಅಪಾರ ಜ್ಞಾನಿಗಳೂ ಅನುಭವಿಗಳೂ ಆದ ಶ್ರೀಗಳವರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ನಾನಾ ಭಾಗಗಳಲ್ಲಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ, ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀಬಾಲಗಂಗಾಧರನಾಥ ಮಹಾಸ್ವಾಮಿಗಳವರ ಹೆಸರೇ ಒಂದು ಚೈತನ್ಯದ ಜಲಪಾತ. ಸಕಲ ಮಾನವ ಕುಲಕ್ಕೆ ಲೇಸ ಬಯಸುವ ಮಹಾನ್ ಮಾನವತಾವಾದಿಗಳು. ಇವರು ಧರ್ಮ ಹಿಮಾಲಯದ ಉನ್ನತ ಶಿಖರ; ಯೋಗವಿಜ್ಞಾನದಾಗಸದ ಭವ್ಯ ಭಾಸ್ಕರ; ಕರುಣೆಯೇ ಮೂರ್ತಿವೆತ್ತ ಮಹಂತ; ದಯಾಪೂರಿತ ಧರ್ಮಾರಾಧನೆಗಿಳಿದ ಸಂತ. ಸೇವೆಯೇ ಪೂಜೆ-ಲೋಕಕಲ್ಯಾಣವೇ ಅವರ ನವ್ಯ ವೇದಾಂತ. ಜಾತಿ, ಕುಲ, ಗೋತ್ರ, ಮಡಿ, ಮೈಲಿಗೆಗಳ ಭೇದವನ್ನು ಬದಿಗೊತ್ತಿ, ಸರ್ವರಲ್ಲೂ ಸರ್ವೇಶನನ್ನು ಕಂಡ ದಿಟ್ಟ ಸಂನ್ಯಾಸಿ. ಲೋಕದ ತಮವ ದೂಡಲು ವಿದ್ಯಾದೀವಿಗೆ ಬೆಳಗಿದ ಜ್ಞಾನಪಿಪಾಸಿ. ಮತಿಗೆ ಮಂಗಳಗೈದಂತೆ ಒಡಲಿಗೆ ಅನ್ನವಿಟ್ಟ ಗುರು. ಹಿಂದೂ ಧರ್ಮದ ಹಿರಿಮೆ ಎತ್ತಿ ಸಾರಿದ ಕಲ್ಪತರು. ಸುಕ್ಷೇತ್ರ ಶ್ರೀ ಆದಿಚುಂಚನಗಿರಿಯನ್ನು ತ್ರಿವಿಧ ದಾಸೋಹ ಕೇಂದ್ರ ಗೈದ ಮಹಾನ್ ತಪಸ್ವಿ. ಪೂರ್ಣಚಂದ್ರನಂತೆ ಥಳಥಳ ಬೆಳಗುವ ತೇಜಸ್ವಿ. ಸಾಧನೆಯಿಂದ ಸಿದ್ಧಿ ಕಂಡ ಯೋಗ ರತ್ನಾಕರ. ಮಾನವಕುಲದ ಕಲ್ಯಾಣಕ್ಕಾಗಿ ಬದುಕ ಮೀಸಲಿಟ್ಟ ಕೃಪಾಕರ. ನೊಂದವರ ಬೆಂದವರ ಪಾಲಿಗೆ ವಾತ್ಸಲ್ಯ ಭಂಡಾರ. ಕಾಲಧರ್ಮಕ್ಕೆ ಸ್ಪಂದಿಸಿದ ಸುರಕಾಮಧೇನು. ನೀಡುವ ಉಪದೇಶ ಮಧುರಾತಿಮಧುರ ನುಡಿ ಜೇನು. ಭಾರತೀಯ ಋಷಿ ಜೀವನದ ಔನ್ನತ್ಯವೇರಿದ ದಿಟ್ಟ ವೇದಾಂತಿ. ಅಡಿಗಡಿಗೂ ಗೈದದ್ದು ಲೋಕಕಲ್ಯಾಣ ಕ್ರಾಂತಿ. ಜಗದ್ಗುರು ಎಂಬ ಪದಕ್ಕೆ ನೈಜ ಅರ್ಥವಂತಿಕೆ ನೀಡಿದ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಭೂಪ; ಕರುನಾಡಿನ ಮನೆಮನೆಯ ದೀಪ.
ಸುಕ್ಷೇತ್ರ ಶ್ರೀ ಆದಿಚುಂಚನಗಿರಿಯು ಶ್ರೀ ಶ್ರೀಗಳವರ ಅನುಪಮ ಸಾಧನೆಯಿಂದ ಸರ್ವಜನಾಂಗದ ತೋಟವಾಗಿದೆ. ಸುಜ್ಞಾನ ವಿಜ್ಞಾನಗಳ ಕೇಂದ್ರವಾಗಿದೆ. ಹಸಿದ ಒಡಲಿಗೆ ಅನ್ನವಿಡುತ್ತಿದೆ. ವಿದ್ಯೆ ಅರ್ಜಿಸಲು ಬರುವವರ ಹೃನ್ಮನಗಳಿಗೆ ಪಾಠ ಹೇಳುತ್ತಿದೆ. ಭವ್ಯ ಭಾರತದ ಮಹಾನ್ ಗುರುಕುಲವಾಗಿದೆ. ಕಾವಿಪತಾಕೆ ಮುಗಿಲು ಮುಟ್ಟಿ ಹಾರಾಡುತ್ತಿದೆ. ವೇದೋಪನಿಷತ್‌ಗಳ ಮಂಗಳ ಶ್ಲೋಕ ನಬೋಮಂಡಲದಲ್ಲಿ ಅನ್ನಪೂರ್ಣೆ ಹಸನ್ಮುಖಳಾಗಿ ಮೆರೆದಿದ್ದಾಳೆ. ಧರ್ಮದೇವತೆ ನಗು ತುಂಬಿ ನೆಲೆಸಿದ್ದಾಳೆ. ತಾಯಿ ಕನ್ನಡಾಂಬೆ ಕಂಗೊಳಿಸುತ್ತಿದ್ದಾಳೆ. ಮುಕ್ತಿಕಾಂತೆ ಯೋಗತಪದಲ್ಲಿ ಮುಳುಗಿದ್ದಾಳೆ. ಸತ್ಯ, ಶಾಂತಿ, ಕರುಣೆ, ಧರ್ಮ, ವಿವೇಕಗಳು ಇಲ್ಲಿ ಸಾಮರಸ್ಯದಿಂದ ಬೆಸೆದಿವೆ. ಚುಂಚನಗಿರಿಯಲ್ಲಿ ಮೂಡಿದ ಯೋಗ ಭಾಸ್ಕರನ ಹೊಂಗಿರಣ ಕನ್ನಡನಾಡಿನ ಉದ್ದಗಲಕ್ಕೂ ಹರಡಿದೆ. ಅಜ್ಞಾನದ ಕತ್ತಲ ದೂಡಿದೆ. ಚೈತನ್ಯದ ಚಿಲುಮೆ ಚಿಮ್ಮಿದೆ. ಏಳಿ ಎದ್ದೇಳಿ.... ವಾಣಿ ಮತ್ತೊಮ್ಮೆ ಮೊಳಗಿದೆ. ಜನ ಜಾಗೃತಿ ಮೂಡಿದೆ. ಗಿರಿಯ ಕಲ್ಲು ಕಲ್ಲುಗಳು ಮಾರ್ದನಿಸುತ್ತಿವೆ: ’ಆದಿಚುಂಚನಗಿರಿ-ಸರ್ವ ಜನಾಂಗದ ಐಸಿರಿಯಾಗಿದೆ.’
ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಅವಿಶ್ರಾಂತ ಸೇವೆಯಿಂದ ಧರ್ಮಕ್ಷೇತ್ರದಲ್ಲಿ  ಅಭೂತಪೂರ್ವವಾದ ಸಾಧನೆಯಾಗಿದೆ. ನೊಂದವರ, ಬೆಂದವರ, ಅನಾಥರ, ದಿಸೆಗೆಟ್ಟವರ, ಬಹುಮಂದಿ ಬದುಕು ಬಂಗಾರವಾಗಿದೆ. ಬಡತನ, ಅಜ್ಞಾನ, ಅನಕ್ಷರತೆ, ಮೂಢನಂಬಿಕೆ, ದಾರಿದ್ರ್ಯ ಕವಿದಿರುವ ಕಡೆಗೆ ಸ್ವಯಂ ಹೋಗಿ ಪಾದಯಾತ್ರೆ ಮಾಡಿದ್ದಾರೆ. ನೊಂದವರನ್ನು ಸಾಂತ್ವನಗೊಳಿಸಿದ್ದಾರೆ. ಅಳುವವರ ಬಿಸಿ ಕಂಬನಿಗಳನ್ನು ಒರೆಸಿದ್ದಾರೆ. ಒಡಲು ತುಂಬಿದ್ದಾರೆ. ಜೊತೆಗೆ ಮಡಿಲು ತುಂಬಿದ್ದಾರೆ. ದೀನದಲಿತರಿಗೆ ವಿದ್ಯಾದಾನ ಮಾಡಿದ್ದಾರೆ. ಒಡಲಿಗೆ ಅನ್ನವಿಟ್ಟಿದ್ದಾರೆ. ಮತಿಗೆ ಮಂಗಳದ ತಿಳಿವು ತುಂಬಿದ್ದಾರೆ. ಅಸಂಖ್ಯಾತ ಮಕ್ಕಳಿಗೆ ಆಶ್ರಯವಿತ್ತಿದ್ದಾರೆ. ಮಹಿಳೆಯರ ಕಲ್ಯಾಣ ಕಾರ್ಯಕ್ರಮಕ್ಕೆ ನಾಂದಿ ಹಾಡಿ ’ಮಹಿಳಾ ಸೇವಾಶ್ರಮ’ ತೆರೆದ ಮೊದಲ ಮಠಾಪತಿಗಳಾಗಿದ್ದಾರೆ. ಮಾನವರಲ್ಲಿ ದೇವರನ್ನು ಹುಡುಕುವ ವಿರಕ್ತವೀರರಾಗಿದ್ದಾರೆ. ಭಕ್ತರೆಡೆಗೆ ಮಾತೃ ಹೃದಯ ಹೊತ್ತು ಓಡೋಡಿ ಬರುವ ಗುರುದೇವರಾಗಿದ್ದಾರೆ. ಅತ್ಯಲ್ಪ ಕಾಲದಲ್ಲಿ ಮಾನವ ಸೇವೆ ಮಾಡುವುದರ ಮುಖಾಂತರ ರಾಷ್ಟ್ರದ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ದುಡಿದ ಯೋಗಿ ಶ್ರೇಷ್ಠರಾಗಿದ್ದಾರೆ. ಪರಿವ್ರಾಜಕ  ವ್ರತವನ್ನು ಯಶಸ್ವಿಯಾಗಿ ನಿರ್ವಹಿಸಿ ಧರ್ಮಕ್ಷೇತ್ರದ ಯುಗಯೋಗಿಗಳಾಗಿದ್ದಾರೆ. ಕೇವಲ ಗುಡಾರದ ಗುರುವಾಗಿರದೆ ಮಠವನ್ನು ಬಿಟ್ಟು ಭಕ್ತರಿರುವೆಡೆಗೆ ಧಾವಿಸಿ ಬರುವ ದೇವಗುರುಗಳಾಗಿದ್ದಾರೆ. ಮಹಾಕಾಯಕ ಮಾಡಿ, ಕ್ರಾಂತಿಕಾರಿ  ವಿಚಾರಧಾರೆಗಳಿಂದ ನುಡಿದಂತೆ ನಡೆವ ಮಹಾತ್ಮರಾಗಿದ್ದಾರೆ. ಶ್ರೀ ಸಾಮಾನ್ಯರ ಅಸಾಮಾನ್ಯ ಜಗದ್ಗುರುಗಳಾಗಿ ಮಾನವೀಯತೆಯ ನಂದಾ ದೀಪ ಬೆಳಗಲು ಬಂದ ಭಗವಂತನೇ ಆಗಿದ್ದಾರೆ.
ಈ ತನಕ ಸಂನ್ಯಾಸಿಗಳಿಗೆ ಕೇವಲ ’ಸಂನ್ಯಾಸ ಧರ್ಮವೇ ಪ್ರಧಾನವಾಗಿತ್ತು. ಆದರೆ ಈ ಯುಗಯೋಗಿಗೆ ಸಂನ್ಯಾಸ ಧರ್ಮದೊಂದಿಗೆ ಸಮಾಜ ಧರ್ಮ-ರಾಷ್ಟ್ರಧರ್ಮ-ಕಾಲಧರ್ಮಗಳೂ ಸಹ ಪ್ರಧಾನವೆನಿಸಿವೆ. ಕಾಲಧರ್ಮಕ್ಕೆ ಸ್ಪಂದಿಸಿ ಉಳಿದ ಮೂರು ಧರ್ಮಗಳನ್ನು ಸಮನ್ವಯಗೊಳಿಸಿ, ಹಿಂದೂ ಧರ್ಮದ ಪುನರುತ್ಥಾನಕ್ಕೆ, ಮಾನವಕುಲದ  ಕಲ್ಯಾಣಕ್ಕೆ ಬದುಕನ್ನು ಸವೆಸುವ ನಿಜ ಜಗದ್ಗುರುಗಳಾಗಿರುವುದು ಈ ಯುಗದ ಭಾಗ್ಯ. ಈ ಜಗದ ಭಾಗ್ಯ.
ಶ್ರೀ ಸಾಮಾನ್ಯರ ಜನನ ಮಾತಾಪಿತೃಗಳ ಸಂಯೋಗದಿಂದಾದರೆ, ಮಹಾತ್ಮರ ಉದಯ ಭುವನದ ಭಾಗ್ಯದಿಂದಾಗಿರುತ್ತದೆ. ಈ ಭವ್ಯ ಭಾರತದ ಅಸಾಮಾನ್ಯ ವ್ಯಕ್ತಿಗಳಲ್ಲಿ ಒಂದು ಯುಗಶಕ್ತಿಯಾಗಿ ವಿರಾಜಿಸುತ್ತಿರುವ ಅಧ್ಯಾತ್ಮ ಜಗತ್ತಿನ ಭಾಸ್ಕರ ಜಗದ್ಗುರು ಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಕರುನಾಡಿನ ಕಲ್ಪವೃಕ್ಷವಾಗಿದ್ದಾರೆ. ಭರತ ಖಂಡದ ಕಾಮಧೇನುವಾಗಿದ್ದಾರೆ.
ಸೇವೆಗೆ ಸಂದ ಗೌರವ:
ಅತ್ಯಲ್ಪ ಅವಯಲ್ಲಿ ತಮ್ಮ ಅದ್ವಿತೀಯ ಸೇವೆ ಹಾಗೂ ಸಾಧನೆಗಳ ಮೂಲಕ ಜನಮಾನಸದಲ್ಲಿ ವಿರಾಜಮಾನರಾಗಿರುವ ಪರಮಪೂಜ್ಯ ಯುಗಯೋಗಿ ಜಗದ್ಗುರು ಶ್ರೀಶ್ರೀಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಸುವರ್ಣ ಮುಕುಟಕ್ಕೆ ಕೇಂದ್ರ ಸರ್ಕಾರದ ಅತ್ಯುನ್ನತ ಗೌರವ ’ಪದ್ಮಭೂಷಣ’ ವೆಂಬ ಮತ್ತೊಂದು ರತ್ನ ಸೇರ್ಪಡೆಯಾಗಿದೆ. ಹೌದು, ಸಮಾಜಸೇವೆಯನ್ನೇ  ಉಸಿರಾಗಿಸಿಕೊಂಡಿರುವ ಮಹಾಸ್ವಾಮಿಗಳವರು ಎಂದಿಗೂ ಸೇವಾರತ್ನ, ಧರ್ಮರತ್ನ, ನಾಡರತ್ನ ಮಾತ್ರವಲ್ಲ ಯಾವತ್ತೂ ಭಾರತರತ್ನವೇ.
ಪರಮಪೂಜ್ಯ ಮಹಾಸ್ವಾಮಿಗಳವರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಸಮಾಜದ ಹಿತಕ್ಕಾಗಿಯೇ ಮೀಸಲಿಟ್ಟವರು. ಹಿಂದುಳಿದ ಸಮಾಜಕ್ಕೊಂದು ಆದರ್ಶಯುತ ಜೀವನ ವಿಧಾನವನ್ನು ರೂಪಿಸಿಕೊಟ್ಟ ಪುಣ್ಯಾತ್ಮರು. ’ಪರೋಪಕಾರಾರ್ಥಮಿದಂ ಶರೀರಂ’ ಎಂಬುದಕ್ಕೆ ಅನ್ವರ್ಥನಾಮವೇ ಪೂಜ್ಯರು. ಪ್ರತಿಯೊಬ್ಬರ ಆತ್ಮೋದ್ಧಾರಕ್ಕಾಗಿ ಶ್ರಮಿಸಿದ ಮಂಗಳ ಸ್ವರೂಪರು. ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಪೂಜ್ಯರು ಸೇವೆ ಸಲ್ಲಿಸದ ಕ್ಷೇತ್ರವಿಲ್ಲ. ಕೇವಲ ಮೂರು-ಮೂರೂವರೆ ದಶಕಗಳಲ್ಲಿ ಇಡೀ ಯುಗಧರ್ಮವನ್ನೇ ಪರಿವರ್ತನೆ ಮಾಡುವಂತಹ ಅದ್ಭುತವಾದ ಪವಾಡ ಸದೃಶ ಸೇವಾಕಾರ್ಯಗಳನ್ನು ಸಾಸಿದ ಯುಗಪುರುಷರು.
ತಮ್ಮ ಸೇವಾ ಸಾಧನೆಗಳಿಂದ ಕೀರ್ತಿಯ ಶಿಖರವನ್ನೇರಿದರೂ ಪೂಜ್ಯರು ಎಂದೂ ಮಠಾಪತಿಯೆಂಬ ಹಮ್ಮುಬಿಮ್ಮು ತೋರಿದವರಲ್ಲ. ಬೀಗಿದವರೂ ಅಲ್ಲ. ಅವರು ಎಂದಿಗೂ ಮಂದಸ್ಮಿತರೇ. ಸಾಸಿದ್ದು ಅದ್ವಿತೀಯ. ಕಲ್ಪನಾತೀತ. ಅಕ್ಷರ ವಂಚಿತ ಮಕ್ಕಳಿಗೆಲ್ಲ ಜ್ಞಾನದೀವಿಗೆಯ ಬೆಳಕನ್ನು ನೀಡಿ ಅವರೆಲ್ಲರ ಬಾಳನ್ನು ಬೆಳಗಿದವರು. ಸನ್ಮಾರ್ಗದಲ್ಲೇ ನಡೆಯುವಂತೆ ತಿಳಿಹೇಳಿ ಎಲ್ಲರ ಪಾಲಿಗೆ ಧರ್ಮದೀವಟಿಗೆಯಾದವರು. ಸಕಲ ಮಾನವಕುಲಕ್ಕೆ ಲೇಸನ್ನೇ ಬಯಸಿದ ಮಹಾನ್ ಮಾನವತಾವಾದಿಗಳು. ಸಂತಶ್ರೇಷ್ಠರಾದ ಪೂಜ್ಯರು ಸಂತಕುಲಕ್ಕೆ ಆದರ್ಶಪ್ರಾಯರಾದವರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಇಂದು ವಿಶ್ವವ್ಯಾಪಕವಾಗಿ ಬೆಳೆದು ಸರ್ವಜನರ ಪ್ರಶಂಸೆಗೆ ಪಾತ್ರವಾಗುವುದಕ್ಕೆ ಕಾರಣ, ಪರಮಪೂಜ್ಯ ಮಹಾಸ್ವಾಮಿಗಳವರ ಶಕ್ತಿ ಹಾಗೂ ಕರ್ತೃತ್ವ ಶಕ್ತಿ. ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಆಶಿಸದೆ ಮಾನವ ಸೇವೆಯನ್ನೇ ಮಾಧವ ಸೇವೆಯೆಂದು ನಂಬಿ ನಡೆಯುತ್ತಿರುವ ಪರಮಪೂಜ್ಯರ ಶ್ರೀಕಂಠವನ್ನಲಂಕರಿಸಿದ ಪ್ರಶಸ್ತಿ ಪುರಸ್ಕಾರಗಳೆಷ್ಟೊ, ಮುತ್ತುರತ್ನಗಳ ಸುವರ್ಣ ಮುಕುಟಗಳೆಷ್ಟೋ. ಆದರೂ ಕೇಂದ್ರ ಸರ್ಕಾರದ ಅತ್ಯುನ್ನತ ಗೌರವ ’ಪದ್ಮಭೂಷಣ’ ಸಂದಿರುವುದು ಶ್ರೀಮಠದ ಇತಿಹಾಸದಲ್ಲಿ ಚರಿತ್ರಾರ್ಹವಾಗಿದೆ.
- ಮೇಲುಕೋಟೆ ವಿ.ಎನ್. ಗೌಡ

ನೀವು ಏನನ್ನು ಕೊಡುತ್ತೀರೋ ಅದು ಹಿಂದಿರುಗಿ ಬರುತ್ತದೆ ಎಂಬ ಮಾತು ಸುಳ್ಳಲ್ಲ. ನೀವು ಜನರಿಗೆ ಪ್ರೀತಿ, ಗೌರವ ಕೊಟ್ಟರೆ ಅವರು ಅದನ್ನೇ ಹಿಂದಿರುಗಿಸುತ್ತಾರೆ. ಆದ್ದರಿಂದ ಯಾರಿಗೂ ಕೆಟ್ಟದ್ದನ್ನು ಮಾಡಬಾರದು.http://vngowda2006.blogspot.com/b/post-preview?token=jimyyTUBAAA.gT6cQaSGAbN0MKUnxl62rw.gD3HN9jBd6RAEza4A0mpCg&postId=804006952511168992&type=POST