Wednesday 29 February 2012



ಮಾರ್ಚ್ ತಿಂಗಳು ಬಂದಿದೆ. ಇನ್ನೆರಡು ತಿಂಗಳು ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಕಾಲ. ತರಗತಿಗಳಲ್ಲಿ ವರ್ಷವೆಲ್ಲಾ ಕಲಿತದ್ದನ್ನು ಪರೀಕ್ಷೆಯ ಮೂಲಕ ಮೌಲ್ಯಮಾಪನಕ್ಕೆ ಒಡ್ಡಿಕೊಳ್ಳುವ ಕಾಲ. ಇಂದಿನ ಪರೀಕ್ಷೆಗಳು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಪಾಠ ಹೇಳಿದ ಗುರುಗಳಿಗೂ, ತಂದೆ ತಾಯಿಗಳಿಗೂ, ಸಾರ್ವಜನಿಕರಿಗೂ ಹೌದು ಎನ್ನುವಂತಾಗಿದೆ. ಪರೀಕ್ಷೆಗಳನ್ನು ನಡೆಸುವುದೇ ಅದ್ಯಾಪಕರಿಗೆ ಒಂದು ಬಗೆಯ ಪರೀಕ್ಷೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ತಮ್ಮ ಮಕ್ಕಳು ಯಶಸ್ಸನ್ನು ಗಳಿಸಲು ತಂದೆ ತಾಯಿಯರು ಪಡುವ ಆತಂಕ, ಶ್ರಮ ಮತ್ತೊಂದು ಬಗೆಯ ಪರೀಕ್ಷೆ. ಇನ್ನು ಪರೀಕ್ಷಾ ಸಂದರ್ಭದಲ್ಲಿ ಸದ್ದು ಗದ್ದಲವಿಲ್ಲದೆ, ಶಾಂತಿಯನ್ನು ಕದಡದೆ ಪರೀಕ್ಷೆ ನಡೆಯಲೆಂಬ ಆತಂಕ ಸಾರ್ವಜನಿಕರನ್ನೂ ಕಾಡುತ್ತದೆ.
ಹಿಂದಿನ ಗುರುಕುಲ ಪದ್ಧತಿಯಲ್ಲಿಯೂ ಪರೀಕ್ಷಾ ವ್ಯವಸ್ಥೆ ಇದ್ದಿತಾದರೂ ಆಗ ಗುರುವಾದವನು ಶಿಷ್ಯರ ನಡೆ ನುಡಿ, ಗಳಿಸಿದ ಜ್ಞಾನ, ಅಧ್ಯಯನ ಮಾಡುತ್ತಿದ್ದ ಬಗೆ-ಮೊದಲಾದುವುಗಳನ್ನು ಗಮನಿಸಿಯೇ ವಿದ್ಯಾರ್ಥಿಯ ಜ್ಞಾನದ ಎತ್ತರವನ್ನು ನಿರ್ಣಯಿಸುತ್ತಿದ್ದರು. ಆದರೆ ಇಂದು ಆ ವ್ಯವಸ್ಥೆ ಇಲ್ಲವಾದರೂ, ವಿದ್ಯಾರ್ಥಿಗಳಿಗೆ ಇನ್ನಿತರ ವಿಷಯಗಳಲ್ಲಿರುವಷ್ಟು ಆಸಕ್ತಿ ಓದಿನಲ್ಲಿ ಇಲ್ಲದಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಪಠ್ಯಪಾಠಕ್ಕಿಂತ ಆಟಪಾಠಗಳತ್ತ ಹಾಗೂ ಟಿವಿ ಇಂಟರ್‌ನೆಟ್‌ಗಳತ್ತಲೇ ಹೆಚ್ಚು ಒಲವು. ಜ್ಞಾನ ಸಂಪಾದನೆಯತ್ತ ಗಮನವೇ ಇಲ್ಲವೇನೋ ಎಂಬ ಅನುಮಾನ ಕಾಡುತ್ತದೆ. ಗುರು ಹಿರಿಯರ ಬಗ್ಗೆ ಗೌರವ ಭಾವನೆಯಿಲ್ಲ. ಹೇಗಾದರೂ ಮಾಡಿ ಪರೀಕ್ಷೆಯಲ್ಲಿ ಪಾಸಾದ ಸರ್ಟಿಫಿಕೇಟ್ ಪಡೆಯಬೇಕೆಂಬುದು ಅವರ ಉದ್ದೇಶ. ಹಾಗೆ ನೋಡಿದರೆ ಇಂದು ಪರೀಕ್ಷೆಗಳ ಪಾವಿತ್ರ್ಯತೆಯೂ ಉಳಿದಿಲ್ಲ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಮಾಡಲು ಅವಕಾಶ ಕಲ್ಪಿಸಿಕೊಟ್ಟು ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ದ್ರೋಹವೆಸಗಿದರೆ ಮತ್ತೆ ಕೆಲವು ಪರೀಕ್ಷಾ ಕೊಠಡಿಗಳಲ್ಲಿ ಮೇಲ್ವಿಚಾರಕರನ್ನು ಹೆದರಿಸಿ ನಕಲು ಮಾಡುವುದು ಕಂಡುಬರುತ್ತಿದೆ. ಕೆಲವೊಮ್ಮೆ ಹಣದಾಸೆಗೆ ಬಲಿಯಾಗಿ ಮೇಲ್ವಿಚಾರಕರೇ ಒಬ್ಬರು ಬರೆದ ಉತ್ತರ ಪತ್ರಿಕೆಯನ್ನು ಬೇರೊಬ್ಬರ ಉತ್ತರ ಪತ್ರಿಕೆಯೊಡನೆ ಸೇರಿಸಲು ಪ್ರಯತ್ನಿಸುವುದು ಆಗಾಗ ನಡೆಯುತ್ತಿರುವುದನ್ನು ಗಮನಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ನಕಲು ಮಾಡಲು ಅವಕಾಶ ಮಾಡಿಕೊಡಲಿಲ್ಲವೆಂದು ತಮಗೆ ಪಾಠ ಹೇಳಿಕೊಟ್ಟ ಅದ್ಯಾಪಕರ ಮೇಲೆಯೇ ಹಲ್ಲೆ ಮಾಡುವ ವಿದ್ಯಾರ್ಥಿಗಳಿದ್ದಾರೆ. ಅದ್ಯಾಪಕರಿಗೆ ವಿದ್ಯಾರ್ಥಿಗಳ ಮೇಲೆ ಹಿಡಿತವಿಲ್ಲ. ಇವುಗಳನ್ನೆಲ್ಲ ಗಮನಿಸುತ್ತಿರುವ  ಪೋಷಕರು ಏನೂ ಮಾಡಲಾಗದೆ ಮೂಕ ಪ್ರೇಕ್ಷಕರಾಗಿದ್ದಾರೆ. ತಮ್ಮ ನಡೆ ನುಡಿಗಳನ್ನು ಗಮನಿಸುತ್ತಿರುವ ಅದ್ಯಾಪಕ ವೃಂದ, ಪೋಷಕ ವೃಂದ ಹಾಗೂ ನೆರೆಹೊರೆಯ ಜನತೆ ಏನೆಂದುಕೊಂಡಾರೊ ಎಂಬ ಕನಿಷ್ಠ ಭಯವೂ ವಿದ್ಯಾರ್ಥಿಗಳಿಗಿಲ್ಲದೇ ಹೋಗಿರುವುದು ನಿಜಕ್ಕೂ ದುರಂತವೇ ಹೌದು. ಹೀಗಾದರೆ ಮುಂದಿನ ಭವಿಷ್ಯದ ಗತಿಯೇನು? ಭವಿಷ್ಯದಲ್ಲಿ  ದೇಶದ ನಿರ್ಮಾಣದ ಹೊಣೆ ಹೊತ್ತವರು ವಿದ್ಯಾರ್ಥಿ ದೆಸೆಯಲ್ಲಿಯೇ ಹೀಗೆ ನಡೆದುಕೊಂಡರೆ ಭವಿಷ್ಯದಲ್ಲಿ ಬೆಳಕನ್ನು ಕಾಣುವ ಬಗೆಯಾದರೂ ಹೇಗೆ? ಎಂಬ ಪ್ರಶ್ನೆ ಕಾಡದೇ ಇರದು.
 ಇದೊಂದು ಪರ್ವಕಾಲ. ಇಂದಿನ ಮಕ್ಕಳು ಹಿಂದಿನ ಪೀಳಿಗೆಗಿಂತ ತುಂಬಾ ಬುದ್ಧಿವಂತರು, ಕುಶಲಮತಿಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇಂದಿನ ವಿದ್ಯಾರ್ಥಿಗಳ ನಡೆವಳಿಕೆಗಳನ್ನು ಗಮನಿಸಿದರೆ ಪರಿಸ್ಥಿತಿ ಆರೋಗ್ಯಕರವಾಗಿಲ್ಲ ಎಂದು ಯಾರಿಗೇ ಆಗಲಿ ಅನಿಸದೇ ಇರದು. ಇದಕ್ಕೆ ಕೇವಲ ವಿದ್ಯಾರ್ಥಿಗಳನ್ನಷ್ಟೇ ಹೊಣೆಗಾರರನ್ನಾಗಿಸುವಂತಿಲ್ಲ. ಇದರಲ್ಲಿ ಭಾವಿ ಸತ್ಪ್ರಜೆಗಳ ನಿರ್ಮಾತೃಗಳೆನಿಸಿದ ಅದ್ಯಾಪಕ ವೃಂದದ ಹೊಣೆ ಅಧಿಕವಾಗಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ, ಜ್ಞಾನಾರ್ಜನೆಯಲ್ಲಿ ಆಸಕ್ತಿ ಮೂಡಿಸಿ ಅವರಲ್ಲಿ ಉತ್ತಮ ಗುಣಶೀಲಗಳನ್ನು ಮೂಡಿಸುವ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಹಾಗೆ ನೋಡಿದರೆ ಇಂದು ಒಳ್ಳೆಯ, ಬುದ್ಧಿವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕೆಲವೇ ಕೆಲವು ವಿದ್ಯಾರ್ಥಿಗಳು ಮಾಡುವ ಹೀನ ಕೃತ್ಯಗಳಿಗೆ ಇಡೀ ವಿದ್ಯಾರ್ಥಿ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಆ ದೃಷ್ಟಿಯಿಂದ ಅದ್ಯಾಪಕರು, ಪೋಷಕರು ಹಾಗೂ ಸರ್ಕಾರ-ಮೂವರೂ ಒಟ್ಟಾಗಿ ಸೇರಿ ಮಕ್ಕಳ ಅಧ್ಯಯನಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು.
ಪೋಷಕರು ತಮ್ಮ ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸುತ್ತಲೇ, ಅವರು ಕಾಲೇಜು ಶಿಕ್ಷಣಕ್ಕೆ ಪ್ರವೇಶ ಪಡೆದ ನಂತರ ಅವರನ್ನು ಬೇರ‍್ಯಾರೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದಂತೆ ಎಚ್ಚರ ವಹಿಸಬೇಕು. ಅವರ ಸ್ನೇಹ ಸಹವಾಸಗಳನ್ನು  ಗಮನಿಸುತ್ತಿರಬೇಕು, ಅಡ್ಡದಾರಿಗಿಳಿಯದಂತೆ ನಿಗಾ ವಹಿಸಬೇಕು. ಸ್ನೇಹಿತರಂತೆ ವರ್ತಿಸಿ ಮಕ್ಕಳ ಮನಸ್ಸಿನಲ್ಲಿರುವುದನ್ನು ಅರಿತು ಅವರಿಗೆ ಮಾರ್ಗದರ್ಶನ ಮಾಡಬೇಕು. ಅವರ ವಿದ್ಯಾಭ್ಯಾಸದ ಅವಧಿ ಮುಗಿಯುವವರೆಗೆ ಜ್ಞಾನಾರ್ಜನೆಯಲ್ಲಿ ತೊಡಗಿಕೊಳ್ಳುವಂತಹ ಸನ್ನಿವೇಶವನ್ನು ಕಲ್ಪಿಸಿಕೊಡಬೇಕು. ಪೋಷಕರಿಗಿಂತ ಹೆಚ್ಚಾಗಿ ಅದ್ಯಾಪಕರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕು. ಪಾಠ ಪ್ರವಚನ ಮಾಡುವುದಷ್ಟೇ ಅಲ್ಲ, ಅದರ ಜೊತೆಗೆ ವಿದ್ಯಾರ್ಥಿಗಳ ನಡೆವಳಿಕೆಗಳನ್ನು ತಿದ್ದುವ ಸಾಮರ್ಥ್ಯವೂ ಇರಬೇಕು. ವರ್ಷಕ್ಕೊಮ್ಮೆ ನಡೆಯುವ ಪರೀಕ್ಷೆಗಳು ಹೆಚ್ಚು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಸರಿಯಾಗಿ ನಡೆಯಬೇಕು. ಇಂದಿನ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಜನ ನಂಬಿಕೆ ಕಳೆದುಕೊಳ್ಳವುದಕ್ಕೆ ಕಾರಣವೂ ಇದೇ ಆಗಿದೆ. ಚೆನ್ನಾಗಿ ಓದಿ, ಚೆನ್ನಾಗಿ ಬರೆದವನಿಗೆ ಕಡಮೆ ಅಂಕ, ಮರು ಎಣಿಕೆಯಲ್ಲಿ ಅದರ ತಿದ್ದುಪಡಿ, ಕಡಮೆ ಬಂದಿದ್ದ ಅಂಕ ಹೆಚ್ಚಾಗುವುದು, ಪ್ರತಿಭಾವಂತರಿಗಿಂತ ದಡ್ಡರೇ ಹೆಚ್ಚು ಅಂಕ ಪಡೆಯುವುದು, ಅದಕ್ಕೆಲ್ಲ ಒಳದಾರಿಗಳಿವೆ ಎಂಬ ಅನುಮಾನ ಜನರಲ್ಲಿ ನೆಲೆಯಾಗಿರುವುದು ಇಡೀ ಪರೀಕ್ಷಾ ವ್ಯವಸ್ಥೆಯ ಬಗೆಗೆ ಜನತೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಜನರಲ್ಲಿ ಬೇರೂರಿರುವ ಈ ಭಾವನೆಯನ್ನು ಅಳಿಸುವಲ್ಲಿ ಅದ್ಯಾಪಕ ವರ್ಗ ಹಾಗೂ ಸರ್ಕಾರ ತಮ್ಮ ಪಾರದರ್ಶಕತೆಯನ್ನು ಮೆರೆಯಬೇಕು. ಪರೀಕ್ಷಾ ಪ್ರಾರಂಭದಿಂದ ಫಲಿತಾಂಶ ಪ್ರಕಟವಾಗುವವರೆಗೆ ಸಂಬಂಧಪಟ್ಟವರೆಲ್ಲರೂ ಎಚ್ಚರದಿಂದ, ನಿಷ್ಪಕ್ಷತನದಿಂದ ಕಾರ್ಯ ನಿರ್ವಹಿಸಿದಾಗ ಎಲ್ಲರಿಗೂ ನ್ಯಾಯ ಒದಗಿಸಿದಂತಾಗುತ್ತದೆ.
ಆ ದೃಷ್ಟಿಯಿಂದ ಈ ಬಗೆಗೆ ಶಿಕ್ಷಣ ತಜ್ಞರು, ಅದ್ಯಾಪಕ ಮತ್ತು ಪೋಷಕ ವರ್ಗದವರು ಹಾಗೂ ಸರ್ಕಾರ ಒಟ್ಟಿಗೆ ಸೇರಿ ಆಮೂಲಾಗ್ರವಾಗಿ ಚರ್ಚಿಸಿ ವಿದ್ಯಾರ್ಥಿ ಹಾಗೂ ಪೋಷಕರಿಗೆ ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಪೂರ್ಣ ನಂಬಿಕೆ ಉಂಟಾಗುವಂತೆ ಮಾಡಬೇಕು.

No comments:

Post a Comment